ಸಾರಾಂಶ
ಯಲ್ಲಾಪುರ: ಕೈಗಾ-ಬಾರೆ ಘಟ್ಟದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಸಾವಿರಾರು ಮರ ಕಟಾವು ಕಾಮಗಾರಿಯನ್ನು ನಿಲ್ಲಿಸಬೇಕು. ಭಾರೀ ಭೂಕುಸಿತ ಸೂಕ್ಷ್ಮ ಪ್ರದೇಶಗಳ ಕಾಳಿ ಕಣಿವೆ ಇದಾಗಿದೆ. ವ್ಯಾಪಕ ಮಳೆ ಬೀಳುವ ಬಾರೆ ಘಟ್ಟದಲ್ಲಿ ಈಗಿರುವ ರಸ್ತೆ ಅಭಿವೃದ್ಧಿ ಮಾಡಿ, ಅಗಲೀಕರಣ ಕೈಬಿಡಿ ಎಂದು ವೃಕ್ಷಲಕ್ಷ ಆಂದೋಲನ, ಪರಿಸರ, ರೈತ ಕಿಸಾನ್, ವನವಾಸಿ ಸಂಘಟನೆ ವತಿಯಿಂದ ರಾಜ್ಯ ಅರಣ್ಯ ಸಚಿವರು ಮತ್ತು ಪಿಸಿಸಿಎಫ್ ಅವರಿಗೆ ಮನವಿ ಸಲ್ಲಿಸಲಾಗಿದೆ.ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಇಲ್ಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಮೂಲಕ ಅರಣ್ಯ ಇಲಾಖೆ ಸಚಿವರಿಗೆ ಮನವಿ ಪತ್ರ ನೀಡಲಾಯಿತು.
ಅಣಶಿ ರಾಷ್ಟ್ರೀಯ ಉದ್ಯಾನ, ದಾಂಡೇಲಿ ಅಭಯಾರಣ್ಯ, ಕಾಳಿ ಅಣೆಕಟ್ಟುಗಳ ಸರಮಾಲೆ ಮಧ್ಯೆ ಸೂಕ್ಷ್ಮ ಕಾಳಿ ಕಣಿವೆಯನ್ನು ಇನ್ನಷ್ಟು ಧ್ವಂಸ ಮಾಡಬಾರದು. ಕಾಳಿ ಕಣಿವೆಯ ಕಳಚೆ ಭೂಕುಸಿತದ ದುರಂತದಿಂದ ಅಪಾರ ಹಾನಿಯಾಗಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.ಗೋವಾ ಬೃಹತ್ ತಂತಿ ಮಾರ್ಗ ನಿರ್ಮಾಣಕ್ಕೆ (ಮಹದಾಯಿ ಅರಣ್ಯ) ಅರಣ್ಯ ಸಚಿವರು ತಡೆ ನೀಡಿದ್ದನ್ನು ಪರಿಸರ ಸಂಘಟನೆಗಳು ಅಭಿನಂದಿಸಿದೆ. ಯಲ್ಲಾಪುರಕ್ಕೆ-ಬಾರೆ ಘಟ್ಟಕ್ಕೆ ಭೇಟಿ ನೀಡಿ ಎಂದು ಅರಣ್ಯ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ವೃಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಕ ನರಸಿಂಹ ಸಾತೊಡ್ಡಿ ಜಂಟಿಯಾಗಿ ಮನವಿ ಮಾಡಿದ್ದಾರೆ.
ಬಾರೆಘಟ್ಟ ಸೂಕ್ಷ್ಮ ಭೂ ಕುಸಿತ ಪ್ರದೇಶ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ವರದಿ ನೀಡಿವೆ ಎಂದು ಈ ಅಧ್ಯಯನ ಸಮಿತಿ ಸದಸ್ಯರೂ ಆಗಿರುವ ಡಾ. ಕೇಶವ ಎಚ್. ಕೊರ್ಸೆ ತಿಳಿಸಿದ್ದಾರೆ. ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಹಾಗೂ ಭಾರತೀಯ ವಿಜ್ಞಾನಿಗಳು ಕಾಳಿ ಕಣಿವೆಯ ಪರಿಸರ ಧಾರಣ ಸಾಮರ್ಥ್ಯ ಮುಗಿದಿದೆ ಎಂದು ಎಚ್ಚರಿಸಿದ್ದಾರೆ.ಪರಿಸರ ಕಾರ್ಯಕರ್ತರ ಮನವಿಯಂತೆ ಮಳೆಗಾಲದಲ್ಲಿ ಮರ ಕಟಾವು ಕಾಮಗಾರಿಗೆ ತಡೆ ನೀಡಿದ್ದೀರಿ. ಆದರೆ ಮುಂದೆಯೂ ಪುನಃ ಕಟಾವು ಮಾಡದಂತೆ ಶಾಶ್ವತವಾಗಿ ಇದಕ್ಕೆ ತಡೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹ ಮಾಡಿದೆ.
ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ಈ ನಿಯೋಗದಲ್ಲಿ ವೃಕ್ಷ ಲಕ್ಷ ಆಂದೋಲನದ ಸಂಚಾಲಕ ನರಸಿಂಹ ಸಾತೊಡ್ಡಿ, ವೃಕ್ಷಲಕ್ಷದ ಡಾ. ರವಿ ಭಟ್ಟ ಬರಗದ್ದೆ, ಕೆ.ಎಸ್. ಭಟ್ಟ ಆನಗೋಡ, ಪ್ರಮುಖರಾದ ಉಮೇಶ ಭಾಗವತ ಕಳಚೆ, ಜಿ.ಎಸ್. ಭಟ್ಟ ಕಾರೆಮನೆ, ರಾಜಶೇಖರ ಧೂಳಿ, ದತ್ತಾತ್ರೇಯ ಭಟ್ಟ ಕಣ್ಣಿಪಾಲ್ ಮತ್ತಿತರರು ಉಪಸ್ಥಿತರಿದ್ದರು.