ಜಲ್ಲಿ ಕ್ರಷರ್ ನಿರ್ಮಾಣಕ್ಕೆ ಅನುಮತಿ ನೀಡದಂತೆ ಮನವಿ

| Published : Mar 06 2024, 02:18 AM IST

ಸಾರಾಂಶ

ಪ್ರಭಾವಿ ವ್ಯಕ್ತಿಯೊಬ್ಬರು ಜಲ್ಲಿ ಕ್ರಷರ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಜಲ್ಲಿ ಕ್ರಷರ್ ನಿರ್ಮಾಣ ಮಾಡಲು ಅನುಮತಿ ನೀಡದಂತೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನ ಮರ್ಲಹಳ್ಳಿ ಗ್ರಾಮದಲ್ಲಿ ಕ್ರಷರ್ ನಿರ್ಮಾಣಕ್ಕೆ ಅನುಮತಿ ನೀಡದಂತೆ ಒತ್ತಾಯಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ್ಯ ರೈತ ಸಂಘ, ದಸಂಸ, ಮಾದಿಗ ದಂಡೋರ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ, ತಾಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಲಹಳ್ಳಿ ಕರೆ ಬಂಡೆ ಗುಡ್ಡದ ರಿ.ಸ. ನಂ.67ರಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಜಲ್ಲಿ ಕ್ರಷರ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಜಲ್ಲಿ ಕ್ರಷರ್ ನಿರ್ಮಾಣ ಮಾಡಲು ಅನುಮತಿ ನೀಡದಂತೆ ಒತ್ತಾಯಿಸಿದ್ದಾರೆ.

ಮರ್ಲಹಳ್ಳಿ ಗ್ರಾಮಕ್ಕೆ ಅನತೀ ದೂರದಲ್ಲಿರುವ ಕರೆ ಬಂಡೆ ಗುಡ್ಡದ ಸುತ್ತಲೂ ಪಲವತ್ತಾದ ಕೃಷಿ ಭೂಮಿಗಳು ಇದ್ದು ಇಂದಿಗೂ ನೂರಾರು ಕುಟುಂಬಗಳು ಅದೇ ಕೃಷಿ ಭೂಮಿಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಜತೆಗೆ ದನಕರುಗಳ ಮೇವಿಗೂ ಆಶ್ರಯವಾಗಿದೆ. ನೂರಾರು ರೈತರು ಗುಡ್ಡವನ್ನು ದಾಟಿಕೊಂಡು ಜಮೀನುಗಳಿಗೆ ತೆರಳಬೇಕಿದೆ. ಈಗಿದ್ದರೂ ಕೆಲವರು ಗುಡ್ಡದಲ್ಲಿ ಕ್ರಷರ್ ನಿರ್ಮಾಣಕ್ಕೆ ಮುಂದಾಗಿರುವುದು ಇಲ್ಲಿನ ಜನರಿಗೆ ಭಯದ ವಾತವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ಗ್ರಾಮದ ಸಮೀಪವೇ ಇರುವ ಗುಡ್ಡದಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ಮಾಡಿದರೆ ಹಲವು ಸಮಸ್ಯೆಗೆ ಕಾರಣವಾಗಲಿದೆ. ಪರಿಸರಕ್ಕೆ ಹಾನಿಯಾಗುವ ಜತೆಗೆ ಅಂತರ್ಜಲ ಕಡಿಮೆಯಾಗಿ ನೂರಾರು ರೈತ ಕುಟುಂಬಗಳು ಬೀದಿಗೆ ಬರಲಿವೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಕರೆ ಬಂಡೆ ಗುಡ್ಡದಲ್ಲಿ ಜಲ್ಲಿ ಕ್ರಷರ್ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಹಾಗೊಂದು ವೇಳೆ ಅನುಮತಿ ನೀಡಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ,ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ದಾನಸೂರನಾಯಕ, ತಾಲೂಕು ರೈತ ಸಂಘದ ಅಧ್ಯಕ್ಷ ಮರ್ಲಹಳ್ಳಿ ರವಿ ಕುಮಾರ್, ಖಜಾಂಚಿ ನಾಗರಾಜ, ಕಾರ್ಯದ್ಯಕ್ಷ ಎಸ್.ಟಿ.ಚಂದ್ರಣ್ಣ, ಡಿ.ಬಿ.ಕೃಷ್ಣ ಮೂರ್ತಿ, ತಿಪ್ಪಯ್ಯ,ಲಕ್ಷ್ಮಣ, ಪಾಪನ್ಣ,ಶಿವಣ್ಣ,ಕೋನಸಾಗರ ಮಂಜಣ್ಣ, ಚಂದ್ರಣ್ಣ,ನಾಗಣ್ಣ, ಯುವರಾಜ, ಶಶಿ ಇದ್ದರು.