ಬ್ಯಾಡಗಿ: ಅನಧಿಕೃತವಾಗಿ ನೋಂದಣಿಯಾಗಿರುವ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ (ಡಿಆರ್‌ಎಚ್‌ಆರ್/ಎಸ್‌ಓಆರ್/292/2019-20 ದಿನಾಂಕ:03-08-2019) ಇದನ್ನು ತನಿಖೆಗೊಳಪಡಿಸಿ ಇದರ ನೋಂದಣಿ ರದ್ದುಪಡಿಸುವಂತೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ಮಾಜಿ ಕಬಡ್ಡಿ ಕ್ರೀಡಾಪಟು ಮಲ್ಲಿಕಾರ್ಜುನ ಕೋಡಿಹಳ್ಳಿ ನೇತೃತ್ವದ ತಂಡವು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ ಅಧ್ಯಕ್ಷ ಲಿಂಗನಗೌಡ ಅರಳೀಹಳ್ಳಿ ನೋಂದಣಿ ಸಂದರ್ಭದಲ್ಲಿಯೇ ಇನ್ನಿತರ 11 ಸದಸ್ಯರ ಸಹಿಗಳನ್ನು ನಕಲಿ (ಫೋರ್ಜರಿ) ಮಾಡಿದ್ದು, ಈ ಕುರಿತು ಕಾರ್ಯದರ್ಶಿ ದೇವರಾಜ ದ್ಯಾವಣ್ಣನವರ ಸಂಸ್ಥೆಯ ನೋಂದಣಿ ದಿನಾಂಕದಿಂದ 2024ರ ವರೆಗೆ ನಾನು ಕಾರ್ಯದರ್ಶಿಯಾಗಿ ಮಾಡಿದ ಸಹಿ ಅಲ್ಲವೆಂದು 2024ರ ನವೀಕರಣ (ರಿನ್ಯೂವಲ್) ಸಂದರ್ಭದಲ್ಲಿ ಲಿಖಿತ ಹೇಳಿಕೆ ನೀಡಿರುವುದು ಜಿಲ್ಲಾ ಉಪನಿಬಂಧಕರ ಕಚೇರಿ ಹಾವೇರಿ ಇವರ ಬಳಿ ದಾಖಲಾಗಿರುತ್ತದೆ.

ಸತ್ಯಾಸತ್ಯತೆ ಹೊರಬರಲಿ: ಮೇಲೆ ತಿಳಿಸಿದ ಸಂಸ್ಥೆಯು ನೋಂದಣಿ ಸಂದರ್ಭದಲ್ಲಿಯೇ ಸಹಕಾರಿ ಸಂಘ ಸಂಸ್ಥೆಗಳ ನೋಂದಣಿ ಕಾಯಿದೆ 1960ರ ನಿಯಮ ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ ಅನಧಿಕೃತ ನೋಂದಣಿಯಾಗಿದ್ದು ಅದಾಗ್ಯೂ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ ನಮ್ಮದೇ ಸಂಸ್ಥೆ ಅಧಿಕೃತವೆಂದು ಖೊಟ್ಟಿ ದಾಖಲೆ ಸೃಷ್ಟಿಸಿ ಉಪ ನಿಬಂಧಕರ ಕಣ್ತಪ್ಪಿಸಿ ನವೀಕರಣವಾಗುತ್ತಿರುವುದು ಸಹಕಾರಿ ಸಂಘ ಸಂಸ್ಥೆಗಳ ನೋಂದಣಿ ಕಾಯಿದೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು ಮೆಲ್ನೋಟಕ್ಕೆ ಕಂಡು ಬರುತ್ತದೆ, ಕೂಡಲೇ ಮೂಲ ದಾಖಲಾತಿಗಳನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ದಲಿತರು ಹಾಗೂ ರೈತರ ಮಕ್ಕಳಿಗೆ ಇಲ್ಲ ಅವಕಾಶ: ಸುರೇಶ ಛಲವಾದಿ ಮಾತನಾಡಿ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ ತನ್ನ ನವೀಕರಣ ವೇಳೆ ಉಪ ನಿಬಂಧಕರ ಕಚೇರಿಗೆ ತಿಳಿಸಿದ ಹಾಗೂ ಸೂಚಿಸಿದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನುಮಾನಗಳಿವೆ. ಇದನ್ನು ಅನಧಿಕೃತವಾಗಿ ನೋಂದಣಿಯಾದ ಸಂಸ್ಥೆಯೊಂದು ಇತ್ತೀಚೆಗೆ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ಕೊರಟಗೆರೆಯಲ್ಲಿ ಆಟವಾಡಲು ಅವಕಾಶ ನಿರಾಕರಣೆಯಲ್ಲಿ ಹಸ್ತಕ್ಷೇಪ ನಡೆಸಿದ್ದಲ್ಲದೇ ದಲಿತ ಹಾಗೂ ರೈತರ ಮಕ್ಕಳಿಗೆ ಅನ್ಯಾಯವೆಸಗಿದ್ದು ಕೂಡಲೇ ಮೂಲ ನೋಂದಣಿ ಸಮಯದಲ್ಲಿದ್ದ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿದಂತೆ ಎಲ್ಲಾ 11 ಜನ ಸದಸ್ಯರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ವಿಚಾರಣೆಗೊಳಪಡಿಸಬೇಕಲ್ಲದೇ ಮೂಲ ದಾಖಲೆಗಳನ್ನು ಹಾಜರಿಪಡಿಸಿಕೊಂಡು ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆ ಹಾವೇರಿ (ಡಿಆರ್‌ಎಚ್‌ಆರ್/ಎಸ್‌ಓಆರ್/292/2019-20 ದಿನಾಂಕ:03-08-2019) ಇದನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಬಡ್ಡಿ ಕ್ರೀಡಾಪಟು ಪ್ರಕಾಶ ತಾವರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.