ಚಾಮರಾಜನಗರ ಬಂದ್‌ಗೆ ಸಹಕರಿಸಲು ಮನವಿ: ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ

| Published : Dec 31 2024, 01:03 AM IST

ಚಾಮರಾಜನಗರ ಬಂದ್‌ಗೆ ಸಹಕರಿಸಲು ಮನವಿ: ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿಶ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಡಿ. 31ರ ಮಂಗಳವಾರ ಕರೆ ನೀಡಿರುವ ಚಾಮರಾಜನಗರ ಬಂದ್‌ಗೆ ನಗರದ ಜನತೆ ಶಾಂತಿಯುತವಾಗಿ ಸಹಕರಿಸುವಂತೆ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮನವಿ ಮಾಡಿದರು. ಚಾಮರಾಜನಗರದಲ್ಲಿ ನಾನಾ ಸಂಘಟನೆಗಳ ಅಧ್ಯಕ್ಷರು, ಮುಖಂಡರ ಸಭೆಯಲ್ಲಿ ಮಾತನಾಡಿದರು.

ಅಂಬೇಡ್ಕರ್‌ಗೆ ಕೇಂದ್ರ ಸಚಿವ ಶಾ ಹೇಳಿಕೆಗೆ ಖಂಡನೆ । ಜ್ಞಾನ ಪ್ರಕಾಶ ಸ್ವಾಮೀಜಿ ಭಾಗಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿಶ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಡಿ. 31ರ ಮಂಗಳವಾರ ಕರೆ ನೀಡಿರುವ ಚಾಮರಾಜನಗರ ಬಂದ್‌ಗೆ ನಗರದ ಜನತೆ ಶಾಂತಿಯುತವಾಗಿ ಸಹಕರಿಸುವಂತೆ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮನವಿ ಮಾಡಿದರು.

ನಗರದ ಪ್ರವಾಸಿಮಂದಿರದಲ್ಲಿ ಸಂಜೆ ನಡೆದ ನಾನಾ ಸಂಘಟನೆಗಳ ಅಧ್ಯಕ್ಷರು, ಮುಖಂಡರ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ವಾರದಿಂದಲೂ ನಗರದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಡಿವೀಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ ಗಳಲ್ಲಿ ವರ್ತಕರು, ಕೋಮುವಾರು ಯಜಮಾನರನ್ನು ಸಂಘ- ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಭೇಟಿ ಮಾಡಿ ಮಂಗಳವಾರ ಬಂದ್ ಅನ್ನು ಬೆಂಬಲಿಸಬೇಕು ಎಂದು ಕರಪತ್ರ ನೀಡಿ ಮನವಿ ಮಾಡಲಾಗಿದೆ.

ಚಾಮರಾಜನಗರ ಬಂದ್‌ಗೆ ವರ್ತಕರ ಸಂಘ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಚಿತ್ರಮಂದಿರ ಮಾಲೀಕರು, ಬಸ್ ಮಾಲೀಕರು ಚಾಲಕರ ಸಂಘ, ಆಟೋ ಮಾಲೀಕರು ಹಾಗೂ ಚಾಲಕರ ಸಂಘ, ಕಾರು ಮಾಲೀಕರು, ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಗೂಡ್ಸ್ ಮಾಲೀಕರ, ಚಾಲಕರ ಸಂಘ, ಹೋಟೆಲ್ ಮಾಲೀಕರು, ಚಿತ್ರಮಂದಿರಗಳ ನೌಕರರು, ಪಟ್ಟಣದ ಎಲ್ಲಾ ಕೋಮಿನ ಯಜಮಾನರು, ಸಮುದಾಯದವರು ಹಾಗೂ ಸಂಘ- ಸಂಸ್ಥೆಗಳ ಮುಖಂಡರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬಂದ್ ಯಶಸ್ವಿಯಾಗಲಿದೆ. ಹಾಗಾಗಿ ನಗರದ ಜನತೆ ಶಾಂತಿಯುತ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀಪ್ರಕಾಶ ಸ್ವಾಮೀಜಿ ಭಾಗವಹಿಸಲಿದ್ದಾರೆ. ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಷಣೆ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರು, ರಾಷ್ಟ್ರಪತಿಗಳ ಮನವಿ ಸಲ್ಲಿಸಲಾಗುವುದು ಚಾಮರಾಜನಗರ ಬಂದ್ ಮುಂಜಾನೆಯಿಂದ ಸಂಜೆಯವರೆಗೂ ಇರುತ್ತದೆ ಎಂದರು.

ಜಿಲ್ಲೆಯಲ್ಲಿರುವ ದಲಿತ, ರೈತ, ಕನ್ನಡ ಮತ್ತು ಪ್ರಗತಿ ಪರ ಸಂಘಟನೆಗಳು ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ನಡೆಸಲು ತೀರ್ಮಾನ ಮಾಡಿದ್ದು, ಕೇಂದ್ರ ಸರ್ಕಾರ ಹಾಗೂ ರಾಷ್ಟಪತಿಗಳ ಗಮನ ಸೆಳೆಯಲು ಈ ಬಂದ್ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಬಸವನಪುರ ರಾಜಶೇಖರ, ಬ್ಯಾಡಮೂಡ್ಲು ಬಸವಣ್ಣ, ಶಿವನಾಗಣ್ಣ, ಸುರೇಶ್ ರಾಮಸಮುದ್ರ, ಸಿದ್ದರಾಜು, ಸೋಮುಸುಂದರ್, ನಾರಾಯಣ್, ಆಲೂರು ನಾಗೇಂದ್ರ, ಶಿವಣ್ಣ, ರಂಗಸ್ವಾಮಿ, ಗುರುರಾಜು, ನಗರಸಭಾ ಮಾಜಿ ಸದಸ್ಯ ಮಹದೇವಯ್ಯ, ಆಟೋ ಉಮೇಶ್, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ಇತರರು ಭಾಗವಹಿಸಿದ್ದರು.