ಸಾರಾಂಶ
ಚಾಮರಾಜನಗರ ಸಂಸದ ಸುನೀಲ್ ಬೋಸ್ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿ ಚಾಮರಾಜನಗರ ಜಿಲ್ಲೆಯನ್ನು ರಾಷ್ಟ್ರೀಯ ಅರಿಶಿನ ಮಂಡಳಿ ವ್ಯಾಪ್ತಿಗೆ ಸೇರಿಸಲು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚಾಮರಾಜನಗರ ಜಿಲ್ಲೆಯನ್ನು ರಾಷ್ಟ್ರೀಯ ಅರಿಶಿನ ಮಂಡಳಿ ವ್ಯಾಪ್ತಿಗೆ ಸೇರಿಸಲು ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯು ಅರಿಶಿನ ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯವು ದೇಶದಲ್ಲಿ ಅರಿಶಿನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಸುಮಾರು 8260 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆ ಬೆಳೆಯಲಾಗುತ್ತಿದ್ದು,ಅಂದಾಜು 49,564.80 ಮೆಟ್ರಿಕ್ ಟನ್‌ಗಳಷ್ಟು ಅರಿಶಿಣ ಉತ್ಪಾದನೆ ಆಗುತ್ತಿದೆ, ಇದು ದೇಶದ ಶೇ.4.2ರಷ್ಟು ಹಾಗೂ ರಾಜ್ಯದ ಶೇ.38.3ರಷ್ಟು. ಇಷ್ಟು ಉತ್ಪಾದನೆ ಇರುವ ಜಿಲ್ಲೆಯ ರೈತರಿಗೆ ಸೂಕ್ತ ಮಾರುಕಟ್ಟೆ ಸೌಕರ್ಯವಿಲ್ಲ, ಅರಿಶಿನ ಮೌಲ್ಯವರ್ಧನ ಚಟುವಟಿಕೆಗಳಿಗೆ ಅವಕಾಶವಿಲ್ಲಾ, ಬೆಳೆ ಇಳುವರಿ ಹೆಚ್ಚಿಸುವ ತಂತ್ರಜ್ಞಾನದ ಕೊರತೆ ಇದೆ, ಸಮರ್ಪಕ ಗೊಬ್ಬರ ಮತ್ತು ಕೀಟನಾಶಕ ಸಮರ್ಪಕ ಬಳಕೆ ಕುರಿತ ಮಾರ್ಗದರ್ಶನವಿಲ್ಲ, ಆದರು ಕೂಡ ದೇಶದ ಅರಿಶಿನ ಉತ್ಪಾದನೆಯಲ್ಲಿ ಚಾಮರಾಜನಗರದ ಕೊಡುಗೆ ಶೇ.4.2 ರಷ್ಟಿದೆ.ಚಾಮರಾಜನಗರ ಜಿಲ್ಲೆಯ ರೈತರಿಗೆ ಅರಿಶಿನ ಬೆಲೆಗೆ ಸಂಬಂಧಿಸಿದಂತೆ ನಾವಿನ್ಯ ತಂತ್ರಜ್ಞಾನಗಳ ಕೊರತೆ ಇದ್ದು ಹಾಗೂ ವೈಜ್ಞಾನಿಕ ಬೆಳೆ ಪದ್ಧತಿ ಬಗ್ಗೆ ಅರಿವಿನ ಕೊರತೆ ಇದೆ. ಆದ್ದರಿಂದ ರಾಷ್ಟ್ರೀಯ ಅರಿಶಿನ ಮಂಡಳಿ ಕಾರ್ಯ ಚಟುವಟಿಕೆಗಳನ್ನು ಚಾಮರಾಜನಗರ ಜಿಲ್ಲೆಗೆ ವಿಸ್ತರಿಸುವುದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿ ರೈತರ ಆದಾಯದಲ್ಲಿ ಸುಧಾರಣೆ ಆಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.