ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ₹೧೦೦೦ ಹೆಚ್ಚಳ ಮಾಡಿ ₹೧೦ ಸಾವಿರಗಳನ್ನು ನೀಡುವಂತೆ ಘೋಷಣೆ ಮಾಡಿದ್ದು, ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಅಧಿಕೃತ ಆದೇಶ ಪತ್ರ ನೀಡಬೇಕು ಎಂದು ಅಗ್ರಹಸಿ ನಗರದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತೆಯರು ಮುಖ್ಯಮಂತ್ರಿ ನುಡಿದಂತೆ ನಡೆಯಬೇಕು. ತಕ್ಷಣ ಅಧಿಕೃತ ಆದೇಶ ಪತ್ರ ಹೊರಡಿಸಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ರಾಜ್ಯ ಸಂಯುಕ್ತ ಆಶಾ ಕಾರಕರ್ತೆಯರ ಸಂಘದ ಉಪಾಧ್ಯಕ್ಷೆ ಎಂ.ಉಮಾದೇವಿ ಮಾತನಾಡಿ, ಜ.೭ರಿಂದ ೧೦ ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸಿದ ಅಹೋರಾತ್ರಿ ಧರಣಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ ತಿಂಗಳಿನಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಸೇರಿಸಿ ಪ್ರತಿ ತಿಂಗಳು ೧೦ ಸಾವಿರ ರು. ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ, ಈ ಬಜೆಟನಲ್ಲಿ ೨೨ ಸಾವಿರ ಆಶಾಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಇನ್ನುಳಿದ ೨೦ ಸಾವಿರ ಆಶಾಗಳಿಗೂ ಅದನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಈಗ ಕೆಲ ಬದಲಾವಣೆಗಳನ್ನು ತರುತ್ತಿದ್ದಾರೆ. ೨೦ ಆಶಾಗಳಿಗೆ ಒಬ್ಬರಂತೆ ನೇಮಕವಾಗಿದ್ದ ಆಶಾ ಸುಗಮಕಾರರನ್ನು ಏಕಾಏಕಿ ಕರ್ತವ್ಯದಿಂದ ವಜಾಗೊಳಿಸಿದ್ದಾರೆ. ಅಲ್ಲದೇ ೬೦ ವರ್ಷಕ್ಕಿಂತ ಮೇಲ್ಪಟ್ಟ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಉಳಿಸಿಕೊಳ್ಳಲು ಆದೇಶ ಕಾಪಿಯನ್ನು ಹೊರಡಿಸಬೇಕು. ₹೨.೫೦ ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ಒಂದು ಸಾವಿರ ಹೆಚ್ಚಿಸಿದಂತೆ ₹೪೨ ಸಾವಿರ ಅಶಾಗಳಿಗೂ ಒಂದು ಸಾವಿರ ರು. ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.₹೧೦,೦೦೦ ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ₹೧೦,೦೦೦ ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದೀರಿ. ಇದರಂತೆ ಕೂಡಲೇ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ಚೆನ್ನಾಜಮ್ಮ, ಭಾಗ್ಯ, ಮಂಜುಳ, ನಂಜಮಣಿ ಶಶಿಕಲಾ, ರಾಜಮ್ಮ, ಶಿವಮ್ಮ, ಅರಸಮ್ಮ, ಶಶಿಕಲಾ ಇತರರು ಭಾಗವಹಿಸಿದ್ದರು.