ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯ ಎಸೆಯದಂತೆ ಸಂಸದರಿಗೆ ಮನವಿ

| Published : Nov 09 2024, 01:04 AM IST

ಸಾರಾಂಶ

ಜಿಲ್ಲೆಯ ಕಾರವಾರ ಮಾಜಾಳಿ ಗಡಿಯಿಂದ ಭಟ್ಕಳ ಗೊರ್ಟೆಯವರೆಗೆ ಚತುಷ್ಫಥ ಹೆದ್ದಾರಿ ನಿರ್ಮಾಣವಾಗಿದ್ದು, ಈಚಿನ ದಿನಗಳಲ್ಲಿ ಈ ಹೆದ್ದಾರಿ ಅಂಚಿನಲ್ಲಿ ತಾಜ್ಯದ ರಾಶಿಯೇ ನಿರ್ಮಾಣವಾಗುತ್ತಿದೆ.

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳಬೇಕೆಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಪಹರೆ ವೇದಿಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ವಿನಂತಿಸಿದೆ.ಈ ಕುರಿತು ಲಿಖಿತ ಮನವಿ ನೀಡಿರುವ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಜಿಲ್ಲೆಯ ಕಾರವಾರ ಮಾಜಾಳಿ ಗಡಿಯಿಂದ ಭಟ್ಕಳ ಗೊರ್ಟೆಯವರೆಗೆ ಚತುಷ್ಫಥ ಹೆದ್ದಾರಿ ನಿರ್ಮಾಣವಾಗಿದ್ದು, ಈಚಿನ ದಿನಗಳಲ್ಲಿ ಈ ಹೆದ್ದಾರಿ ಅಂಚಿನಲ್ಲಿ ತಾಜ್ಯದ ರಾಶಿಯೇ ನಿರ್ಮಾಣವಾಗುತ್ತಿದೆ. ಆಯಾ ನಗರ ಇಲ್ಲವೇ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನ ಹರಿಸದೇ ಇರುವುದು ವಿಷಾದಕರ ಸಂಗತಿಯಾಗಿದೆ.ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತಿರುವುದರಿಂದ ಮಾಲಿನ್ಯ ಉಂಟಾಗುತ್ತಿದ್ದು, ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ತಪ್ಪು ಗ್ರಹಿಕೆ ಉಂಟಾಗಲಿದೆ. ಕಾರವಾರ ವ್ಯಾಪ್ತಿಯಲ್ಲಿ ನಮ್ಮ ಸಂಘಟನೆಯ ವತಿಯಿಂದ ಆಗಾಗ ಸ್ವಚ್ಛಗೊಳಿಸಿದರೂ ಮತ್ತೆ ಮತ್ತೆ ಕಸ ಅದೇ ಸ್ಥಳದಲ್ಲಿ ಎಸೆದು ತ್ಯಾಜ್ಯದ ರಾಶಿಯನ್ನೇ ಚೆಲ್ಲಲಾಗುತ್ತಿದೆ. ಕೆಲವಡೆ ಸ್ಥಳೀಯ ಆಡಳಿತದ ನಿರ್ಲಕ್ಷವೂ ಕಂಡುಬರುತ್ತಿದೆ. ಅಲ್ಲದೇ ಹೆದ್ದಾರಿ ಪ್ರಾಧಿಕಾರವೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ.ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರವು ಅಲ್ಲಲ್ಲಿ ಕಸ ಎಸೆಯದ ಹಾಗೆ ಎಚ್ಚರಿಕೆ ಫಲಕ ಅಳವಡಿಸಬೇಕು. ಅಲ್ಲದೇ ಸ್ಥಳೀಯ ಆಡಳಿತವೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರ ಮೇಲೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಪ್ರಾಧಿಕಾರಕ್ಕೆ ಸೂಕ್ತ ಸೂಚನೆ ನೀಡಬೇಕು. ಅಲ್ಲದೇ ಅವರಿಂದಲೇ ಸ್ಥಳೀಯ ಆಡಳಿತಕ್ಕೆ ಹೆದ್ದಾರಿ ಅಂಚಿನಲ್ಲಿ ಕಸ ಎಸೆಯದಂತೆ ಕ್ರಮಕ್ಕೆ ಸೂಚನೆ ನೀಡುವ ಕಾರ್ಯವಾಗಬೇಕಿದೆ. ತಾವೂ ಜಿಲ್ಲಾಡಳಿತಕ್ಕೆ ಮತ್ತು ಜಿಪಂಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಲಾಯಿತು.ಪಹರೆ ವೇದಿಕೆ ಕಾರ್ಯದರ್ಶಿ ಟಿ.ಬಿ. ಹರಿಕಾಂತ, ಪ್ರಕಾಶ ಕೌರ್, ಖೈರುನ್ನೀಸಾ ಶೇಖ, ಅಜಯ ಸಾವಕಾರ, ವಿಜಯ, ಮನೋಜ ಭಟ್ ಇದ್ದರು.

ಹೊನಗದ್ದೆಯ ದೇವಸ್ಥಾನದಲ್ಲಿ ವಾಲಿ ಮೋಕ್ಷ ತಾಳಮದ್ದಲೆ

ಯಲ್ಲಾಪುರ: ಯಕ್ಷಗಾನ, ತಾಳಮದ್ದಲೆಯಂತಹ ಕಲೆಗಳ ಆಸ್ವಾದನೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಜ್ಞಾನವೃದ್ಧಿಯೂ ಸಾಧ್ಯ ಎಂದು ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ತಿಳಿಸಿದರು.ತಾಲೂಕಿನ ಹೊನಗದ್ದೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕನ್ನಡ ಜ್ಞಾನಯಜ್ಞ- ತಾಳಮದ್ದಲೆ ಸರಣಿಯ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ವೇ. ಗಿರೀಶ ಭಟ್ಟ ಗಿಡಗಾರಿ, ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಜಿ.ವಿ. ಭಟ್ಟ, ಅರ್ಚಕ ವೆಂಕಟರಮಣ ಭಟ್ಟ, ಕರ್ನಾಟಕ ಕಲಾ ಸನ್ನಿಧಿಯ ಅಧ್ಯಕ್ಷ ಶ್ರೀಧರ ಅಣಲಗಾರ, ಸಹ ಕಾರ್ಯದರ್ಶಿ ದಿನೇಶ ಗೌಡ ಇತರರು ಉಪಸ್ಥಿತರಿದ್ದರು. ಎಂ.ವಿ. ಭಟ್ಟ ಗಿಡಗಾರಿ ಸ್ವಾಗತಿಸಿದರು. ಶ್ವೇತಾ ಭಟ್ಟ ನಿರ್ವಹಿಸಿದರು. ಆರ್.ವಿ.ಹೆಗಡೆ ವಂದಿಸಿದರು.

ನಂತರ ನಡೆದ ವಾಲಿ ಮೋಕ್ಷ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ದಿನೇಶ ಭಟ್ಟ ಯಲ್ಲಾಪುರ, ನರಸಿಂಹ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸಿದ್ದರು.

ಜಬ್ಬಾರ್ ಸಮೊ ಸಂಪಾಜೆ(ವಾಲಿ), ರಾಧಾಕೃಷ್ಣ ಕಲ್ಚಾರ್(ರಾಮ), ಮಂಜುನಾಥ ಗೋರ್ಮನೆ(ಸುಗ್ರೀವ), ಆರ್.ವಿ. ಹೆಗಡೆ ಕುಂಬ್ರಿಕೊಟ್ಟಿಗೆ(ತಾರೆ) ವಿವಿಧ ಪಾತ್ರ ನಿರ್ವಹಿಸಿದರು.