ಸೈನಿಕ ಶಾಲೆ ಸೇರಿ ದಕ್ಷಿಣ ಕನ್ನಡಕ್ಕೆ ಹೆಚ್ಚಿನ ರಕ್ಷಣಾ ಮೂಲಸೌಕರ್ಯ ನೀಡಲು ಮನವಿ

| Published : Jan 05 2025, 01:32 AM IST

ಸೈನಿಕ ಶಾಲೆ ಸೇರಿ ದಕ್ಷಿಣ ಕನ್ನಡಕ್ಕೆ ಹೆಚ್ಚಿನ ರಕ್ಷಣಾ ಮೂಲಸೌಕರ್ಯ ನೀಡಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ರಕ್ಷಣಾ ಕ್ಷೇತ್ರಕ್ಕೆ ಮಂತ್ರಿಯಾಗಿ ಗಮನಾರ್ಹ ಕೊಡುಗೆ ನೀಡಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡೀಸ್‌, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಕ್ಯಾಪ್ಟನ್‌ ಪ್ರಾಂಜಲ್‌ ಹಾಗೂ ಕಮಾಂಡರ್‌ ಜಾರ್ಜ್‌ ಮಾರ್ಟಿಸ್‌ ಅವರ ಬಲಿದಾನವನ್ನು ಸದಾ ಸ್ಮರಿಸುವಂತಹ ಕೆಲಸ ಕಾರ್ಯಗಳು ಮಂಗಳೂರಿನಲ್ಲಿ ರಕ್ಷಣಾ ಇಲಾಖೆಯಿಂದ ಆಗಬೇಕು ಎಂದು ಕ್ಯಾ. ಚೌಟ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಶನಿವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಮಂಗಳೂರಿನಲ್ಲಿ ಸೈನಿಕ ಶಾಲೆ ಹಾಗೂ ಮಿಲಿಟರಿ ನೆಲೆ ಸ್ಥಾಪಿಸುವುದು ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ರಕ್ಷಣಾ ಮೂಲಸೌಕರ್ಯ ಒದಗಿಸುವ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.ಮಂಗಳೂರಿನಲ್ಲಿ ಸೈನಿಕ ಶಾಲೆಯನ್ನು ಆರಂಭಿಸುವುದರ ಜತೆಗೆ ಈ ಭಾಗದಲ್ಲಿ ಮಿಲಿಟರಿ ಬೇಸ್‌ನ್ನು ಸ್ಥಾಪಿಸುವುದರಿಂದ ಯುವಜನತೆಯನ್ನು ದೇಶ ಸೇವೆಯತ್ತ ಪ್ರೇರೇಪಿಸುವುದಕ್ಕೆ ಅನುಕೂಲವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವಿಶ್ವದರ್ಜೆ ಶಿಕ್ಷಣ ಸಂಸ್ಥೆಗಳು ಇರುವ ಹಿನ್ನಲೆಯಲ್ಲಿ ಸೈನಿಕ ಶಾಲೆ ಸ್ಥಾಪಿಸುವುದು ಶೈಕ್ಷಣಿಕವಾಗಿಯೂ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ದೇಶದ ರಕ್ಷಣಾ ಕ್ಷೇತ್ರಕ್ಕೆ ಮಂತ್ರಿಯಾಗಿ ಗಮನಾರ್ಹ ಕೊಡುಗೆ ನೀಡಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡೀಸ್‌, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಕ್ಯಾಪ್ಟನ್‌ ಪ್ರಾಂಜಲ್‌ ಹಾಗೂ ಕಮಾಂಡರ್‌ ಜಾರ್ಜ್‌ ಮಾರ್ಟಿಸ್‌ ಅವರ ಬಲಿದಾನವನ್ನು ಸದಾ ಸ್ಮರಿಸುವಂತಹ ಕೆಲಸ ಕಾರ್ಯಗಳು ಮಂಗಳೂರಿನಲ್ಲಿ ರಕ್ಷಣಾ ಇಲಾಖೆಯಿಂದ ಆಗಬೇಕು ಎಂದು ಕ್ಯಾ. ಚೌಟ ಕೋರಿದ್ದಾರೆ.

ತಮ್ಮ ಭೇಟಿ ವೇಳೆ ಕ್ಯಾ. ಚೌಟ ಅವರು ದ.ಕ. ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ತರಬಹುದಾದ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರಾಜನಾಥ್‌ ಸಿಂಗ್‌ ಅವರಿಂದ ಮಾರ್ಗದರ್ಶನವನ್ನು ಕೂಡ ಪಡೆದುಕೊಂಡರು. ಇದೇ ವೇಳೆ ಕ್ಯಾ. ಚೌಟ ಅವರು ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಕರಾವಳಿಯ ಸಂಸ್ಕೃತಿಯ ಸಂಕೇತವಾದ ಕಂಬಳದ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.