ತುರ್ತು ಕಾಮಗಾರಿಗೆ ಪ್ರಾದೇಶಿಕ ವೆಚ್ಚ ನೀಡಲು ಮನವಿ

| Published : Jul 23 2024, 12:32 AM IST

ತುರ್ತು ಕಾಮಗಾರಿಗೆ ಪ್ರಾದೇಶಿಕ ವೆಚ್ಚ ನೀಡಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್‌ ಮಾರ್ಗ ನಿರ್ವಹಣೆಯಲ್ಲಿ ತುರ್ತು ಕಾಮಗಾರಿಗೆ ಅನುದಾನ ನೀಡುವಂತೆ ಯಲ್ಲಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ವಿದ್ಯುತ್‌ ಮಾರ್ಗ ನಿರ್ವಹಣೆಯಲ್ಲಿ ತುರ್ತು ಕಾಮಗಾರಿ ವೆಚ್ಚ ಮತ್ತು ಪ್ರಾದೇಶಿಕ ಹೆಚ್ಚುವರಿ ಕಾಮಗಾರಿ ವೆಚ್ಚವನ್ನು ಇಂಧನ ಇಲಾಖೆ ಈ ವರ್ಷದ ದರಪಟ್ಟಿಯಿಂದ ಕೈಬಿಟ್ಟಿದ್ದು, ಅದನ್ನು ಸೇರಿಸಿ ಕೊಡಬೇಕು ಯಲ್ಲಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಇಂಧನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ.ಯಲ್ಲಾಪುರದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕ ಅವರಿಗೆ ಸಂಘ ಮನವಿ ಪತ್ರ ನೀಡಿದೆ.

ಯಲ್ಲಾಪುರ ತಾಲೂಕಿನಲ್ಲಿ ಎಲ್ಲ ವಿದ್ಯುತ್ ಮಾರ್ಗಗಳು ದಟ್ಟವಾದ ಅರಣ್ಯ ಪ್ರದೇಶದಲ್ಲಿಯೇ ಹಾದು ಹೋಗಿದೆ. ಭಾರಿ ಮಳೆ ಮತ್ತು ಗಾಳಿಗೆ ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದು, ಕಂಬಗಳು ಮುರಿದು, ವಾಹಕಗಳು ತುಂಡಾಗಿ, ವಿದ್ಯುತ್ ಸರಬರಾಜಿಗೆ ವ್ಯತ್ಯಯ ಉಂಟಾಗುತ್ತದೆ. ಮುರಿದ ಕಂಬಗಳನ್ನು ಬದಲಿಸಿ, ಹರಿದು ಬಿದ್ದ ವಾಹಕಗಳನ್ನು ಜೋಡಿಸಿ, ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಲು ಅತೀ ಶೀಘ್ರವಾಗಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿರುವುದರಿಂದ ಕೂಲಿ ನಿರ್ವಹಣಾ ವೆಚ್ಚವು ಅಧಿಕವಾಗಿದೆ. ಬಹಳ ಕಡೆಗಳಲ್ಲಿ ಕಂಬಗಳು ಮುರಿದ ಸ್ಥಳಗಳಿಗೆ ವಾಹನ ಕೊಂಡೊಯ್ಯುವುದು ಅಸಾಧ್ಯವಾದ್ದರಿಂದ ಕಂಬಗಳನ್ನು ತಲೆಮೇಲೆ ಹೊತ್ತು ಸಾಗಿಸುವುದು ಅನಿವಾರ್ಯವಾಗಿದೆ.

ಈ ಹಿಂದಿನ ಎಲ್ಲ ಎಸ್.ಆರ್. ದರಪಟ್ಟಿಗಳಲ್ಲಿಯೂ ತುರ್ತು ಕಾಮಗಾರಿ ವೆಚ್ಚ ಶೇ. ೨೫ ಮತ್ತು ಪ್ರಾದೇಶಿಕ ಹೆಚ್ಚುವರಿ ಕಾಮಗಾರಿ ವೆಚ್ಚ ಶೇ. ೪೫ ನೀಡಲಾಗಿತ್ತು. ಆದರೆ ಈಗಿನ ದರಪಟ್ಟಿ ೨೦೨೩-೨೪ರಲ್ಲಿ ಈ ವೆಚ್ಚ ಕೈಬಿಡಲಾಗಿದೆ. ಅದರಿಂದ ತುರ್ತು ಕಾಮಗಾರಿಗಳನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗುತ್ತದೆ. ಈಗಿನ ದರಪಟ್ಟಿಯಲ್ಲಿ ತುರ್ತು ಕಾಮಗಾರಿ ವೆಚ್ಚ ಶೇ. ೨೫ ಮತ್ತು ಪ್ರಾದೇಶಿಕ ಹೆಚ್ಚುವರಿ ಕಾಮಗಾರಿ ವೆಚ್ಚ ಶೇ. ೪೫ ಸೇರಿಸಿ ಕೊಡಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಎಇಟಿ ಸಂತೋಷ ಬಾವಕರ, ಖಜಾಂಚಿ ಗೋಪಾಲಕೃಷ್ಣ ಕರುಮನೆ, ಸಹ ಕಾರ್ಯದರ್ಶಿ ಮಕ್ಬೂಲ್ ಹಲವಾಯಿಘರ, ಬಾಲಚಂದ್ರ ಭಟ್ಟ, ರಿಗನ್ ಡಿಸೋಜಾ, ಶ್ರೀನಿವಾಸ ಪಟಗಾರ, ಸೈಯದ್ ಮಕ್ಬೂಲ್, ಮಹಮ್ಮದ್ ಜಾಫರ್, ಗಣಪತಿ ಕರುಮನೆ, ಗಣಪತಿ ಹೆಗಡೆ, ಮಾರುತಿ ಗೋವೇಕರ ಉಪಸ್ಥಿತರಿದ್ದರು.