ಮುಂಡರಗಿ: ಎಸ್ಐಆರ್ ಕಾರ್ಯದಲ್ಲಿ ಬಿಎಲ್‌ಒಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹೆಚ್ಚುವರಿ ಕಾರ್ಯದಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿರುವುದನ್ನು ಗಮನಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಸಂಘಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯಿಂದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಎಸ್ಐಆರ್ ಕಾರ್ಯದಲ್ಲಿ ಬಿಎಲ್‌ಒ ಹಾಗೂ ಮೇಲ್ವಿಚಾರಕರಾಗಿ ಭಾಗಿಯಾಗಿರುವ ನೌಕರರು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಬಹುತೇಕ ನೌಕರರು ಶೇ. 100ರಷ್ಟು ಪ್ರಗತಿಯನ್ನು ಸಾಧಿಸಿದ್ದು, ಅನೇಕ ನೌಕರರು ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಆದಾಗ್ಯೂ ಅನವಶ್ಯಕವಾಗಿ ಬಿಎಲ್‌ಒಗಳ ಮೇಲೆ ಹಾಗೂ ಮೇಲ್ವಿಚಾರಕರ ಮೇಲೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಎಸ್ಐಆರ್ ಕಾರ್ಯವನ್ನು ಪೂರ್ಣಗೊಳಿಸಲು ಆನ್ಲೈನ್ ಸಭೆಗಳ ಮೂಲಕ ಹಾಗೂ ದೂರವಾಣಿ ಕರೆಗಳ ಮೂಲಕ ಒತ್ತಡ ಹೇರುವುದು ಸಮಂಜಸವಲ್ಲ ಎಂದರು.ಎಸ್ಐಆರ್ ಕಾರ್ಯದಲ್ಲಿ ಭಾಗಿಯಾಗಿರುವ ಬಿಎಲ್‌ಒಗಳಿಗೆ ಮಾನಸಿಕ ಒತ್ತಡವನ್ನು ಹೇರದಂತೆ,‌ ಮುಂಬರುವ ದಿನಮಾನಗಳಲ್ಲಿ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯದಿಂದ ಮುಕ್ತಗೊಳಿಸಿ, ಮೂಲ ಕರ್ತವ್ಯವನ್ನು ನಿರ್ವಹಿಸಲು ಹಾಗೂ ಬಿಎಲ್‌ಒ ಕರ್ತವ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಾಗೇವಾಡಿಯ ಅಂಗನವಾಡಿಯ ಕಾರ್ಯಕರ್ತೆ ರತ್ನಮ್ಮ ಬಳಿಗಾರ ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸಬೇಕು ಹಾಗೂ ಅವರ ಕುಟುಂಬಕ್ಕೆ ಸಹಾಯ ಸಹಕಾರವನ್ನು ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶಂಕರ ಸರ್ವದೆ, ಗೌರವಾಧ್ಯಕ್ಷ ನಾಗೇಂದ್ರ ಪಟ್ಟಣಶೆಟ್ಟಿ, ಖಜಾಂಚಿ ಶ್ರೀಧರ ದಾನಿ, ಹಿರಿಯ ಉಪಾಧ್ಯಕ್ಷರಾದ ಜಗದೀಶ, ವಿ.ಎನ್. ಪೂಜಾರ, ಮಹೇಶ ಅಲ್ಲಿಪುರ, ಜೆ. ರಾಘವೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಸಿ. ಹರ್ತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಫಕ್ರುದ್ದೀನ್ ನದಾಫ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಬಸವರಾಜ ಪಿ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಂ.ಡಿ. ಬಂಡಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಮಾಯಮ್ಮನವರ, ಪದಾಧಿಕಾರಿಗಳಾದ, ಎಸ್.ಎಸ್. ಮೇಟಿ, ಜಗದೀಶ ಗುಳಾರಿ, ಮೈಲಾರಪ್ಪ, ಮಲ್ಲಿಕಾರ್ಜುನ, ಮೃತ್ಯುಂಜಯ ವಿಭೂತಿ, ಸಂತೋಷ ಜಾಧವ, ಮಾಂತೇಶ ಹಲವಾಗಲಿ, ಕಾಳಪ್ಪ ಬಡಿಗೇರ, ಸುಮಂಗಲ ಬೀಳಗಿ, ಪ್ರಿಯದರ್ಶಿನಿ ಹಳ್ಯಾಳ ಸೇರಿದಂತೆ ವೃಂದ ಸಂಘಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಇಲಾಖೆಗಳನ್ನು ನೌಕರರು ಭಾಗಿಯಾಗಿದ್ದರು.