ಸಾರಾಂಶ
ನರಗುಂದ: ಈಗಾಗಲೇ ರೋಣ ತಾಲೂಕಿನ ಮಲ್ಲಾಪುರ ರೋಣ ಮಾರ್ಗದಲ್ಲಿ ರೈಲು ಮಾರ್ಗ ಇದ್ದು, ಅದೇ ಮಾರ್ಗದಲ್ಲಿರುವ ಕುಷ್ಟಗಿಯಿಂದ ಗೋಕಾಕ ನಗರಕ್ಕೆ ಹೊಸ ರೈಲು ಮಾರ್ಗದ ಸಂಪರ್ಕ ಕಲ್ಪಿಸಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ರಾಘವೇಂದ್ರ ಗುಜಮಾಗಡಿ ಆಗ್ರಹಿಸಿದರು.
ಅವರು ಅಂಚೆ ಕಚೇರಿ ಮೂಲಕ ರೈಲ್ವೆ ಸಚಿವರಿಗೆ ಪತ್ರ ರವಾನೆ ಮಾಡಿ ಆನಂತರ ಮಾತನಾಡಿದರು.ಇದು ನರಗುಂದ ಪಟ್ಟಣದ ಬಹು ವರ್ಷಗಳ ಬೇಡಿಕೆಯಾಗಿದ್ದು, ರೈಲ್ವೆ ಸಚಿವರ ಗಮನಕ್ಕೆ ತಂದು ಈ ಬೇಡಿಕೆ ಈಡೇರಿಸಬೇಕು. ಈ ಹಿಂದೆ ತಾಲೂಕಿನ ಶಿರೋಳ ಗ್ರಾಮಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ ಅವರಿಗೆ ಮನವಿ ಅರ್ಪಿಸಿ, ನರಗುಂದ ಅತಿ ತ್ವರಿತವಾಗಿ ಪ್ರಗತಿ ಹೊಂದುತ್ತಿರುವ ಪಟ್ಟಣವಾಗಿದೆ. ಇಲ್ಲಿ ರೈಲು ಮಾರ್ಗ ಅತಿ ಅವಶ್ಯವಾಗಿದೆ ಎಂದು ಮನವರಿಕೆ ಮಾಡಲಾಗಿದೆ. ಈ ಮಾರ್ಗ ಕುಷ್ಟಗಿ, ಗಜೇಂದ್ರಗಡ, ರೋಣ, ಮಲ್ಲಾಪುರ, ನರಗುಂದ, ಮುನವಳ್ಳಿ, ಯರಗಟ್ಟಿ, ಗೋಕಾಕ, ಘಟಪ್ರಭಾ ಹೀಗೆ ಒಟ್ಟು ಅಂದಾಜು 250 ಕಿಲೋ ಮೀಟರ್‌ಗಳಾಗಬಹುದು. ಈ ಮಾರ್ಗವಾಗಿ ಹಲವು ಯಾತ್ರಾಸ್ಥಳಗಳು ಸಿಗುತ್ತವೆ. ಹನ್ನೆರಡು ತಿಂಗಳು ನಡೆಯುವ ಜಾತ್ರಾ ಮಹೋತ್ಸವಗಳಿವೆ. ಕಾಲಕಾಲೇಶ್ವರ ಇಟಗಿ, ಬಳಗಾನೂರ, ಸವದತ್ತಿಯ ಯಲ್ಲಮ್ಮನಗುಡ್ಡ, ಗೊಡಚಿಯ ವೀರಭದ್ರೇಶ್ವರ ಕ್ಷೇತ್ರ, ಸೊಗಲದ ಸೋಮೇಶ್ವರ ಹಾಗೂ ಗೋಕಾಕ ಫಾಲ್ಸ್‌ಗೆ ಬರುವ ಜನರಿಗೆ ಅನುಕೂಲವಾಗಲಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಗೋವಿನಜೋಳ, ಸೂರ್ಯಕಾಂತಿ ಫಸಲು ಮಾರಾಟ ನಡೆಯುತ್ತದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಇದೆ ಎಂದರು.
ಚನ್ನ ನಂದಿ ಮಾತನಾಡಿ, ಅಗತ್ಯವಾಗಿರುವ ಈ ರೈಲು ಮಾರ್ಗದ ಕುರಿತು ಕೇಂದ್ರ ರೇಲ್ವೆ ಸಚಿವರಿಗೆ ಮನವರಿಕೆ ಮಾಡಿ, ಈ ಹೊಸ ರೈಲು ಮಾರ್ಗಕ್ಕೆ ಅನುಮತಿ ಕೊಡಿಸಬೇಕು ಮತ್ತು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ ಎಂದರು.ಬಸವೇಶ್ವರ ಸಮುದಾಯ ಭವನದ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮಾರುತಿ ಬೋಸಲೆ, ಜೆ.ಆರ್. ಕದಂ, ಆರ್.ಟಿ. ಪಾಟೀಲ ಇದ್ದರು.