ಸಾರಾಂಶ
ಉಡುಪಿ ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಸಿಎನ್‌ಜಿ ಆಟೋ ರಿಕ್ಷಾಗಳಿವೆ. ಆದರೆ ಸಿಎನ್‌ಜಿ ಪೂರೈಕೆಯ ಕೊರತೆಯಿಂದ ಅದನ್ನೇ ಅವಲಂಬಿಸಿರುವ ರಿಕ್ಷಾ ಚಾಲಕರಿಗೆ ಇಂಧನ ಸಿಗದೆ ಪರದಾಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಉಂಟಾಗಿರುವ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಕೊರತೆಯನ್ನು ನೀಗಿಸುವಂತೆ ಯಶೋದಾ ಆಟೋ ಯೂನಿಯನ್ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮನವಿ ಸಲ್ಲಿಸಲಾಯಿತು.ಉಡುಪಿ ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಸಿಎನ್‌ಜಿ ಆಟೋ ರಿಕ್ಷಾಗಳಿವೆ. ಆದರೆ ಸಿಎನ್‌ಜಿ ಪೂರೈಕೆಯ ಕೊರತೆಯಿಂದ ಅದನ್ನೇ ಅವಲಂಬಿಸಿರುವ ರಿಕ್ಷಾ ಚಾಲಕರಿಗೆ ಇಂಧನ ಸಿಗದೆ ಪರದಾಡುವಂತಾಗಿದೆ.
ಉಡುಪಿ ತಾಲೂಕಿನಲ್ಲಿ ಮಲ್ಪೆ, ಬ್ರಹ್ಮಾವರ ಮತ್ತು ಗುಂಡಿಬೈಲುಗಳಲ್ಲಿ 3 ಸಿಎನ್‌ಜಿ ಪಂಪ್ ಇದ್ದು, ಅವುಗಳಿಗೆ ಪ್ರತಿದಿನ 1 ಲೋಡ್ ಇಂಧನ ಮಾತ್ರ ಸರಬರಾಜು ಆಗುತ್ತಿದೆ. ಆದರೆ ಇದು ಉಡುಪಿ ತಾಲೂಕಿನ 1500 ಆಟೋಗಳಿಗೆ ಸಾಕಾಗದೆ ಚಾಲಕರಿಗೆ ತುಂಬಾ ತೊಂದರೆಯಾಗುತ್ತದೆ. ರಿಕ್ಷಾ ಚಾಲಕರು ಇಂಧನ ತುಂಬಿಸಲು ರಾತ್ರಿ ಹಗಲು ಎನ್ನದೆ ಸುಮಾರು 3 ರಿಂದ 4 ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಿಕ್ಷಾ ಚಾಲಕರಿಗೆ ಬಾಡಿಗೆ ಮಾಡುವುದಕ್ಕೆ ಸಮಯ ಸಿಗದೆ, ನಿತ್ಯದ ಜೀವನಕ್ಕೆ, ಸಾಲದ ಕಂತು ಕಟ್ಟುವುದಕ್ಕೆ, ಆಟೋಗಳ ನಿರ್ವಹಣೆಗೂ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಆದ್ದರಿಂದ ಸಿಎನ್‌ಜಿ ಪೂರೈಕೆಯ ಮೇಲಿನ ನಿರ್ಬಂಧವನ್ನು ತಕ್ಷಣ ತೆರವುಗೊಳಿಸಿ, ಇಂಧನ ಪೂರೈಕೆ ಹೆಚ್ಚಿಸಬೇಕು. ಅಗತ್ಯವಿರುವಲ್ಲಿ ಹೆಚ್ಚುವರಿ ಸಿಎನ್‌ಜಿ ಸ್ಟೇಷನ್ ತೆರೆಯಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಯಶೋಧಾ ಆಟೋ ಯೂನಿಯನ್ ಮತ್ತು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.