ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನದಿ ನೀರು ನ್ಯಾಯಮಂಡಳಿ ನೀಡಿರುವ ತೀರ್ಪು ಏಕಪಕ್ಷೀಯ, ಅವೈಜ್ಞಾನಿಕ ಮತ್ತು ಪಾಲಿಸಲಾಗದಂತ ತೀರ್ಪು ಆಗಿರುವುದರಿಂದ ರಾಜ್ಯ ಸರ್ಕಾರ ಈ ತೀರ್ಪನ್ನು ಪೂರ್ಣವಾಗಿ ತಿರಸ್ಕರಿಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಒತ್ತಾಯಿಸಿದರು.ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳು ರೈತರ ಪಾಲಿಗೆ ಮರಣಶಾಸನವಾಗಿವೆ. ಕರ್ನಾಟಕ ಒಪ್ಪಿಕೊಳ್ಳಲು, ಪಾಲಿಸಲು ಸಾಧ್ಯವಿಲ್ಲದಂತಹ ಘೋರ ಆದೇಶವಾಗಿದೆ. ರಾಜ್ಯಸರ್ಕಾರ ಈ ಎಲ್ಲಾ ತೀರ್ಪು, ಆದೇಶಗಳನ್ನು ತಿರಸ್ಕರಿಸಿ ಕಾವೇರಿ ಕೊಳ್ಳದ ನದಿ ನೀರು ಉಳಿವು, ಜಲಾಶಯ ರಕ್ಷಣೆ ಮಾಡುವ ಕರ್ತವ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಮಿಳುನಾಡು ಸರ್ಕಾರ ಒಕ್ಕೂಟಕ್ಕೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ. ಹಠಮಾರಿತನದ ಧೋರಣೆಯಿಂದ ನೀರು ಲಭ್ಯವಿಲ್ಲದಿದ್ದರೂ ನಿರಂತರವಾಗಿ ನೀರನ್ನು ಪಡೆದುಕೊಳ್ಳುತ್ತಿದೆ. ತನ್ನ ಕೃಷಿ ಪ್ರದೇಶವನ್ನು ಕೇಂದ್ರದ ಅನುದಾನದಿಂದ ಹೆಚ್ಚು ಹೆಚ್ಚು ವಿಸ್ತಾರ ಮಾಡಿಕೊಳ್ಳುತ್ತಿದೆ. ಕರ್ನಾಟಕ ನೀರಾವರಿ ಪ್ರದೇಶಗಳ ವಿಸ್ತರಣೆಗೆ ಅಡ್ಡಿಯುಂಟುಮಾಡುತ್ತಿದೆ ಎಂದು ಆರೋಪಿಸಿದರು.ಕರ್ನಾಟಕ ಪ್ರಸ್ತುತ ಹನ್ನೊಂದೂವರೆ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡುತ್ತಿದ್ದು, ೨೦ ಲಕ್ಷಕ್ಕೂ ಹೆಚ್ಚು ನೀರಾವರಿ ಪ್ರದೇಶವನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. ಆದರೆ, ಆ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನವನ್ನೇ ಮಾಡುತ್ತಿಲ್ಲವೆಂದು ದೂರಿದರು.
ಒತ್ತಾಯಗಳೇನು?:ಕಾವೇರಿ ಕೊಳ್ಳದ ನೀರಾವರಿ ಅಂತರ್ಜಲ, ವಿದ್ಯುತ್ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು ಕಾರ್ಯಗತ ಮಾಡಬೇಕು. ಇದಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ ಶೇ.೩೦ರಷ್ಟು ಅನುದಾನವನ್ನು ಕಾಯ್ದಿರಿಸುವುದು. ಅತಿವೃಷ್ಟಿ ಸಮಯದಲ್ಲಿ ಮಳೆ ನೀರನ್ನು ಕಾವೇರಿ ಕೊಳ್ಳದಲ್ಲಿ ಸಂಗ್ರಹಿಸಿ ಹಿಡಿದಿಟ್ಟುಕೊಳ್ಳಬೇಕು. ಇದರಿಂದ ಕಾವೇರಿ ಕೊಳ್ಳದ ಪ್ರದೇಶದ ಬರಗಾಲವನ್ನು ತಡೆಯಬೇಕು.
ಕಾವೇರಿ ಕೊಳ್ಳದಲ್ಲಿ ಸಣ್ಣ, ಮಧ್ಯಮ, ದೊಡ್ಡ ನೀರಾವರಿಯಂತಹ ಯೋಜನೆಯನ್ನು ತುರ್ತಾಗಿ ಕಾರ್ಯಗತಗೊಳಿಸಲು ಕ್ರಮ ವಹಿಸುವುದು. ಕೆಆರ್‌ಎಸ್ ಡ್ಯಾಂ ಭದ್ರತೆ, ರಕ್ಷಣೆ ಮುಖ್ಯವಾಗಿದ್ದು, ಗಣಿಗಾರಿಕೆ, ಟ್ರಯಲ್ ಬ್ಲಾಸ್ಟ್, ಡಿಸ್ನಿಲ್ಯಾಂಡ್ ಕಾರ್ಯಚಟುವಟಿಕೆಗಳನ್ನು ಅಣೆಕಟ್ಟೆಯ ದಿಕ್ಕಿನಲ್ಲಿ ಪೂರ್ಣ ನಿಷೇಧಿಸಬೇಕು.ತಮಿಳುನಾಡಿಗೆ ನಿರಂತರ ನೀರು ಹರಿಸಿದ್ದರಿಂದ ೩೬೦೦ ಕೋಟಿ ರು. ಬೆಳೆ ನಷ್ಟವಾಗಿದ್ದು, ಕೆಆರ್‌ಎಸ್ ವ್ಯಾಪ್ತಿಯಲ್ಲಿ ೧೨೦೦ ಕೋಟಿ ರು. ನಷ್ಟವಾಗಿದೆ. ಇದನ್ನು ರೈತರಿಗೆ ತುಂಬಿಕೊಡಬೇಕು.
ಸುದ್ದಿಗೋಷ್ಠಿಯಲ್ಲಿ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಸಾತನೂರು ವೇಣುಗೋಪಾಲ್, ಮಂಜುನಾಥ್, ನಾರಾಯಣ್, ಕೃಷ್ಣ ಇದ್ದರು.ಬೆಳೆಗೆ ಒಂದು ಕಟ್ಟು ನೀರು ಕೊಡಲು ಒತ್ತಾಯ:
ಹಾಲಿ ಬೆಳೆದು ನಿಂತಿರುವ ಬೆಳೆಗೆ ಒಂದು ಕಟ್ಟು ನೀರು ಹರಿಸುವ ಮೂಲಕ ಬೆಳೆ ರಕ್ಷಿಸುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸದಸ್ಯರು ಆಗ್ರಹಿಸಿದರು.ಕೃಷ್ಣರಾಜಸಾಗರ ಜಲಾಶಯದಲ್ಲಿ ೮೮ ಅಡಿಯಷ್ಟು ನೀರಿದೆ. ಇದರಲ್ಲಿ ೪ ಅಡಿಯಷ್ಟು ನೀರನ್ನು ಬೆಳೆಗಳಿಗೆ ಹರಿಸಲು ಅವಕಾಶವಿದೆ. ಹಿಂದೆಯೂ ಇದೇ ಪರಿಸ್ಥಿತಿ ಇದ್ದಾಗ ನೀರು ಹರಿಸಿರುವ ನಿದರ್ಶನಗಳಿವೆ. ಹಾಗಾಗಿ ಜಿಲ್ಲಾ ಮಂತ್ರಿಗಳು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೆಳೆಗಳಿಗೆ ನೀರು ಹರಿಸುವುದಕ್ಕೆ ಕ್ರಮ ವಹಿಸಬೇಕು. ರೈತರ ಬದುಕನ್ನು ರಕ್ಷಿಸುವಂತೆ ಒತ್ತಾಯಿಸಿದರು.
ರೈತ ಹಿತರಕ್ಷಣಾ ಸಮಿತಿ ಪುನಾರಚನೆಗೆ ಪ್ರಕ್ರಿಯೆ ಆರಂಭ:ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪುನಾರಚನೆಗೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಮೊದಲಿಗೆ ಸಮಿತಿಯಲ್ಲಿರುವ ೯ ಜನರ ಸಭೆ ಕರೆದು ಚರ್ಚಿಸಿ ನಂತರ ಪೂರ್ಣ ಪ್ರಮಾಣದಲ್ಲಿ ಪುನಾರಚನೆ ಮಾಡಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಹೇಳಿದರು.
ಉಪಾಧ್ಯಕ್ಷರಾದ ಆತ್ಮಾನಂದ, ಪ್ರಧಾನ ಕಾರ್ಯದರ್ಶಿ ಜಿ.ಬಿ.ಶಿವಕುಮಾರ್, ಜಂಟಿ ಕಾರ್ಯದರ್ಶಿಗಳಾದ ಕೆ.ಸಿ.ಪ್ರಶಾಂತಬಾಬು, ಗುರುಪ್ರಸಾದ್ ಕೆರಗೋಡು, ಬೇಕ್ರಿರಮೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಸ್.ನಂಜುಂಡೇಗೌಡ ಅವರ ಸಭೆ ಕರೆದು ಚರ್ಚಿಸಲಾಗುವುದು. ಪುನಾರಚನೆಯಾದ ಸಮಿತಿಯಲ್ಲಿ ಶೇ.೮೦ರಷ್ಟು ಯುವಕರಿರಬೇಕೆಂಬ ಧ್ಯೇಯವನ್ನು ಇಟ್ಟುಕೊಳ್ಳಲಾಗಿದೆ. ವಿವಿಧ ಸಂಘಟನೆಗಳ ಮುಖಂಡರು, ರಾಜಕಾರಣಿಗಳನ್ನು ಒಳಗೊಂಡು ಸಮಿತಿಗೆ ಹೊಸ ರೂಪ ನೀಡಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಮಿತಿಗೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ದೊಡ್ಡ ಹೆಸರಿದೆ. ಅದನ್ನು ಉಳಿಸಿಕೊಂಡು ಹೋಗುವ ಸಾಮರ್ಥ್ಯವಿರುವವರನ್ನು ಸಮಿತಿ ಒಳಗೊಳ್ಳಬೇಕು. ಸಮಿತಿಯಿಂದ ದೂರ ಉಳಿದಿರುವ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರನ್ನೂ ಭೇಟಿಯಾಗಿ ಸಭೆಗೆ ಆಹ್ವಾನಿಸುತ್ತೇವೆ ಎಂದು ನುಡಿದರು.