ರಸಗೊಬ್ಬರ ವಿತರಿಸುವಂತೆ ತಹಸೀಲ್ದಾರ್‌ಗೆ ಮನವಿ

| Published : May 13 2025, 11:56 PM IST

ಸಾರಾಂಶ

ಹನೂರು ತಾಲೂಕಿನ ವಿವಿಧ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಬೇಕಾದ ರಸಗೊಬ್ಬರ ನೀಡುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿ ಗುರುಪ್ರಸಾದ್‌ಗೆ ಗೌಡಳ್ಳಿ ಸೋಮಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ರಸಗೊಬ್ಬರ ನೀಡುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಏಕೀಕರಣ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಕರೆಯಲಾಗಿದ್ದ ತಾಲೂಕು ಪದಾಧಿಕಾರಿಗಳ ಸಭೆ ಹಾಗೂ ಬುದ್ಧ ಜಯಂತಿ ಕಾರ್ಯಕ್ರಮದ ನಂತರ ತಾಲೂಕು ದಂಡಾಧಿಕಾರಿ ಗುರುಪ್ರಸಾದ್‌ಗೆ ರಸಗೊಬ್ಬರದ ಅಂಗಡಿಗಳು ರೈತರಿಗೆ ಬೇಕಾದ ಗೊಬ್ಬರ ನೀಡುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ತಾಲೂಕಿನ ಒಡೆಯರಪಾಳ್ಯ ಪಿಜಿ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಬೇಕಾದ ರಸಗೊಬ್ಬರ ನೀಡುತ್ತಿಲ್ಲ. ಇಂತಿಷ್ಟು ಪಡೆಯಬೇಕು ಎಂದು ನಿಬಂಧನೆ ಹೇಳುವ ಅಂಗಡಿ ಮಾಲಿಕರು ರೈತರಿಗೆ ಬೇಕಾದ ಯೂರಿಯಾ ಅಥವಾ ಬೇಕಾದ ರಸಗೊಬ್ಬರಗಳನ್ನು ನೀಡುತ್ತಿಲ್ಲ. ಹೀಗಾಗಿ ತಾಲೂಕು ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ತಹಸೀಲ್ದಾರ್‌ ಭರವಸೆ:

ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಮನವಿ ಸ್ವೀಕರಿಸಿ ಒಡೆಯರಪಾಳ್ಯ, ಪಿಜಿ ಪಾಳ್ಯ ಭಾಗದಲ್ಲಿ ರೈತರಿಗೆ ರಸಗೊಬ್ಬರ ಅಭಾವ ಉಂಟು ಮಾಡುತ್ತಿರುವ ಮತ್ತು ಅವರಿಗೆ ಬೇಕಾದ ಗೊಬ್ಬರ ನೀಡಲು ಸತಾಯಿಸುತ್ತಿರುವ ಅಂಗಡಿಗಳಿಗೆ ತಾಲೂಕು ಆಡಳಿತ ಹಾಗೂ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಬುದ್ಧ ಜಯಂತಿ ಕಾರ್ಯಕ್ರಮವನ್ನು ಸಂಘಟನೆ ವತಿಯಿಂದ ಆಚರಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ:

ಹನೂರು ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ಜಿಲ್ಲಾಧ್ಯಕ್ಷ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷರಾಗಿ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷರಾಗಿ ಚಿಕ್ಕರಾಜು, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಸುಂದರಣ್ಣ, ಪ್ರಧಾನ ಕಾರ್ಯದರ್ಶಿ ಮಹೇಶ್ ಪ್ರಭು ಸಂಘಟನಾ ಕಾರ್ಯದರ್ಶಿಯಾಗಿ ಮಂಟೆಸ್ವಾಮಿಯನ್ನು ಆಯ್ಕೆ ಮಾಡಲಾಯಿತು.ಇದೇ ವೇಳೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಉಪಸ್ಥಿತರಿದ್ದರು.