ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮನವಿ

| Published : Jan 31 2024, 02:19 AM IST

ಸಾರಾಂಶ

ನಮ್ಮ ಬಹುದಿನದ ಬೇಡಿಕೆ ಕಳಸಾ-ಬಂಡೂರಿ ಯೋಜನೆಗೆ ಸಂಬಂಧ ಪಟ್ಟ ಇಲಾಖೆಗಳ ಅನುಮತಿ ಪಡೆದು ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ರೈತ ಹೋರಾಟಗಾರ ರಘುನಾಥರಡ್ಡಿ ಭ. ನಡುವಿನಮನಿ ಆಗ್ರಹಿಸಿದರು.

ನವಲಗುಂದ: ಪಟ್ಟಣದ ರೈತ ಭವನದಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ತಹಸೀಲ್ದಾರ್‌ ಮುಖಾಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಸಂಘಟಿತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ರಘುನಾಥರಡ್ಡಿ ಭ. ನಡುವಿನಮನಿ, ನಮ್ಮ ಬಹುದಿನದ ಬೇಡಿಕೆ ಕಳಸಾ-ಬಂಡೂರಿ ಯೋಜನೆಗೆ ಸಂಬಂಧ ಪಟ್ಟ ಇಲಾಖೆಗಳ ಅನುಮತಿ ಪಡೆದು ಕೂಡಲೇ ಕಾಮಗಾರಿ ಆರಂಭಿಸಬೇಕು.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಆಗಿದೆ. ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮಾರ್ಗ ಸೂಚಿ ಪ್ರಕಾರ ಅತೀ ಕಡಿಮೆ ಪರಿಹಾರ ನೀಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಸರಕಾರ ಕೂಡಲೇ ವಿಶೇಷ ಪ್ಯಾಕೇಜ ಘೋಷಣೆ ಮಾಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಲು ಕ್ರಮ ಜರುಗಿಸಬೇಕು. ಹೆಸರು ಬೆಳೆಗೆ ಬೆಳೆ ವಿಮೆ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ವಿಮಾ ಹಣ ತುಂಬಿದವರಿಗೆ ಪರಿಹಾರ ಹಣ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು. ವಿಮಾ ಕಂಪನಿಯವರು ರೈತರಿಗೆ ಅನ್ಯಾಯ ಹಾಗೂ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ವಿಮಾ ಕಂಪನಿಯವರ ಜೊತೆಗೆ ಸಭೆ ನಡೆಸಿ ಹೆಸರು ಬೆಳೆ ನಾಶಕ್ಕೆ ವಿಮಾ ಪರಿಹಾರ ಸಿಗುವಂತೆ ಮಾಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ರೈತ ಹೋರಾಟಗಾರ ಲೋಕನಾಥ ಹೆಬಸೂರ, ಕಳಸಾ ಬಂಡೂರಿ ಹೋರಾಟಗಾರರು ಹಾಗೂ ಅಮಾಯಕ ರೈತರ ಮೇಲೆ 2016-17ರಿಂದ 2023ರ ವರೆಗೆ ಪೊಲೀಸರು ಹಾಕಿದ ಬಾಕಿ ಉಳಿದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ರೈಲ್ವೆ ಹಾಗೂ ದೂರವಾಣಿ ಇಲಾಖೆಯವರು ಪ್ರಕರಣವನ್ನು ವಾಪಸ್ ಪಡೆಯಬೇಕು. ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆ.10ರಂದು ಕೇಂದ್ರ ಗೃಹ ಸಚಿವ ಅಮೀತ ಶಾ ಅವರು ಹುಬ್ಬಳ್ಳಿಗೆ ಬಂದ ವೇಳೆ ಹಾಗೂ ಫೆ. 26ರಂದು ಮುಖ್ಯಮಂತ್ರಿಗಳು ನವಲಗುಂದಕ್ಕೆ ಬಂದ ವೇಳೆ ರೈತ ಒಕ್ಕೂಟದಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಶಾಂತಿಗೆ ಭಂಗವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಏನಾದರು ಅವಘಡಗಳು ನಡೆದರೆ ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರವೇ ಹೊಣೆ. ಇದಕ್ಕೆ ರೈತರಾಗಲಿ ಹೋರಾಟಗಾರರಾಗಲಿ ಯಾರೂ ಹೊಣೆಗಾರರಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ತಳವಾರ, ಆರ್.ಆರ್. ನಾಗಮ್ಮನವರ, ಎಂ.ಎ. ನಧಾಪ, ವಿಠ್ಠಲ ಗೊಣ್ಣಾಗರ, ಸಿದ್ದಪ್ಪ ಕಂಬಳ್ಳಿ, ಶಂಕರಗೌಡ ಭರಮಗೌಡ್ರ, ಬಸಪ್ಪ ಮುಪ್ಪಯನವರ, ವೈ.ಕೆ. ತಡಹಾಳ, ಭೀಮಪ್ಪ ಹಿರಗಣ್ಣವರ ಉಪಸ್ಥಿತರಿದ್ದರು.