ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಿಡಿ । ಕ್ರಮ ಕೈಗೊಳ್ಳದಿದ್ದರೆ ನಾವು ನೇರ ಕಾರ್ಯಾಚರಣೆ ನಡೆಸುವ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಮಂಗಳವಾರದ ಸಂತೆಯಲ್ಲಿ ಅಕ್ರಮವಾಗಿ ೧೯ಕ್ಕೂ ಹೆಚ್ಚು ಗೋವುಗಳನ್ನು ಬೇರೆಡೆಗೆ ಸಾಗಾಣೆ ಮಾಡಲು ಮುಂದಾಗಿದ್ದವರನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ವಿಶ್ವ ಹಿಂದೂ ಪರಿಷತ್ತು ಬಜರಂಗದಳ ಪ್ರಾಂತ ಗೋ ರಕ್ಷಾ ಸಹ ಪ್ರಮುಖ್ ಶರತ್ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಅಕ್ರಮ ಗೋ ಸಾಗಾಣಿಕೆ, ಗೋಹತ್ಯೆ ಹಾಗೂ ಕಾನೂನುಬಾಹಿರ ಕಸಾಯಿಖಾನೆಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಗಳೇ ನೇರ ಕಾರ್ಯಾಚರಣೆಗೆ ಇಳಿಯಲಿವೆ ಎಂದು ಎಚ್ಚರಿಕೆ ನೀಡಿದರು.

ಗೋ ರಕ್ಷಣೆಗಾಗಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ್ದರೂ, ಕೆಲವು ಅಕ್ರಮ ಜಾಲಗಳು ಪೊಲೀಸರ ಕಣ್ತಪ್ಪಿಸಿ ಗೋವುಗಳನ್ನು ಸಾಗಿಸುತ್ತಿವೆ. ಇದರಿಂದ ಗೋ ರಕ್ಷಣೆ ಕೇವಲ ಕಾಗದದ ಮೇಲಿನ ಕಾನೂನಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ಈಗಾಗಲೇ ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ, ಅಧಿಕಾರಿಗಳಿಂದ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.


೧೯ಕ್ಕೂ ಹೆಚ್ಚು ಗೋವುಗಳ ರಕ್ಷಣೆ:ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ೧೯ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು, ಹಾಸನದಿಂದ ಕೇರಳದ ಕಡೆಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಿ ವಾಹನಗಳನ್ನು ತಡೆದಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆ ಹಾಸನದ ಸಂತೆಯಿಂದ ಗೋವುಗಳನ್ನು ಖರೀದಿಸಿ ಕೇರಳ ಮಾರ್ಗವಾಗಿ ಸಾಗಿಸಲಾಗುತ್ತಿದೆ. ಈಗಾಗಲೇ ಮೂರುಕ್ಕೂ ಹೆಚ್ಚು ವಾಹನಗಳನ್ನು ಪತ್ತೆಹಚ್ಚಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದರು.

ಪೊಲೀಸರ ವಿರುದ್ಧ ಅಸಮಾಧಾನ:

ಅಕ್ರಮ ಗೋ ಸಾಗಾಣಿಕೆ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಯದೇ ಇರುವುದು ಆಶ್ಚರ್ಯಕರ ಸಂಗತಿ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿದ ಒಂದು ದಿನದಲ್ಲೇ ಅಕ್ರಮ ಸಾಗಾಣಿಕೆ ಪತ್ತೆಯಾಗಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಸೇವಾ ಪ್ರಮುಖ್ ವಿಕ್ಕಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಶಶಿ, ನಗರ ಸಹ ಸಂಯೋಜಕ್ ಚೇತನ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.