ನೀರು ಕುಡಿಯಲು ಕೃಷ್ಣಾ ಕಾಲುವೆಗೆ ಇಳಿದಿದ್ದ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಯುವಕರು ಹರಸಾಹಸಪಟ್ಟು ಸಾವಿನ ದವಡೆಯಿಂದ ಯುವಕನನ್ನು ಪಾರು ಮಾಡಿದ ಘಟನೆ ಭಾನುವಾರ ಪಟ್ಟಣದ ನಾರಾಯಣಪೂರ ಎಡದಂಡೆ ಕಾಲುವೆಯ ಅಂಚಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೆಂಭಾವಿ
ನೀರು ಕುಡಿಯಲು ಕೃಷ್ಣಾ ಕಾಲುವೆಗೆ ಇಳಿದಿದ್ದ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಯುವಕರು ಹರಸಾಹಸಪಟ್ಟು ಸಾವಿನ ದವಡೆಯಿಂದ ಯುವಕನನ್ನು ಪಾರು ಮಾಡಿದ ಘಟನೆ ಭಾನುವಾರ ಪಟ್ಟಣದ ನಾರಾಯಣಪೂರ ಎಡದಂಡೆ ಕಾಲುವೆಯ ಅಂಚಿನಲ್ಲಿ ನಡೆದಿದೆ.ಸುರಪುರ ಸಮೀಪ ನಾಗನಟಗಿ ಗ್ರಾಮದವನೆಂದು ಹೇಳಲಾದ ಸದ್ದಾಂ ಎಂಬ ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ರಸ್ತೆಯ ಮೇಲೆ ಹೋಗುತ್ತಿದ್ದ ಜನತೆ ಕಾಲುವೆಯ ಅಂಚಿನಲ್ಲಿ ಬೆನ್ನಟ್ಟಿ ಹೋಗಿ ಯುವಕನನ್ನು ಪಾರು ಮಾಡಿದರು.
ಮುಖ್ಯವಾಗಿ ತಮ್ಮ ಜೀವನದ ಹಂಗು ತೊರೆದು ಯುವಕನನ್ನು ಅಪಾಯದಿಂದ ಪಾರು ಮಾಡುವಲ್ಲಿ ಪಟ್ಟಣದ ಸಂತೋಷ ದೇವೂರ ಹಾಗೂ ಚಾಂದ್ ಪಟೇಲ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯುವಕರ ಸಮಯಪ್ರಜ್ಞೆಗೆ ನೀರಿನ ಸುಳಿಗೆ ಸಿಲುಕಿ ಸ್ವಲ್ಪದರಲ್ಲೆ ಹಾರಿಹೋಗುತ್ತಿದ್ದ ಸದ್ದಾಂ ಎಂಬ ಯುವಕನ ಪ್ರಾಣ ಉಳಿಯುವಲ್ಲಿ ಸಫಲವಾಯಿತು. ನಂತರ ಸಂಬಂಧಿಕರಿಗೆ ಮಾಹಿತಿ ನೀಡಿ ಆತನನ್ನು ಸುರಕ್ಷಿತವಾಗಿ ಮನೆಗೆ ಕಳಿಸಲಾಯಿತು.ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಮೇಲೆತ್ತಿದಾಗ ಆತ ಅತಿಯಾದ ಮದ್ಯಪಾನ ಮಾಡಿದ್ದು ಕಂಡು ಬಂದಿತು. ನಶೆಯಲ್ಲಿ ಕಾಲುವೆಗೆ ಇಳಿದಿದ್ದ ಯುವಕ ನಿಯಂತ್ರಣ ಬಾರದೆ ಕಾಲುವೆಗೆ ಜಾರಿರಬಹುದು ಎಂದು ಹೇಳಲಾಗುತ್ತಿದ್ದು ಮೋಟರ್ ಬೈಕ್ ಮೇಲೆ ಗಲ್ಲಿಗಲ್ಲಿಗಳಲ್ಲಿ ತಿರುಗಾಟ ನಡೆಸಿ ಗ್ಯಾಸ್ ಒಲೆ, ಮಿಕ್ಸರ್, ಕುಕ್ಕರ್ ದುರಸ್ತಿ ಕೆಲಸ ಮಾಡುತ್ತಿದ್ದ ಸದ್ದಾಂ ಮದ್ಯವ್ಯಸನಿಯಾಗಿದ್ದನು ಎಂದು ಅವರ ಕುಟುಂಬದವರು ತಿಳಿಸಿದರು.