ಗಣೇಶ ವಿಸರ್ಜನೆ ವೇಳೆ ನೀರುಪಾಲಾಗುತ್ತಿದ್ದ ಬಾಲಕನ ರಕ್ಷಣೆ

| Published : Sep 09 2024, 01:45 AM IST / Updated: Sep 09 2024, 01:46 AM IST

ಗಣೇಶ ವಿಸರ್ಜನೆ ವೇಳೆ ನೀರುಪಾಲಾಗುತ್ತಿದ್ದ ಬಾಲಕನ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಸ್ವಸ್ಥಗೊಂಡಿದ್ದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಭಟ್ಕಳ: ತಾಲೂಕಿನ ತಲಗೋಡಿನಲ್ಲಿ ಭಾನುವಾರ ಸಂಜೆ ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಬಾಲಕನೋರ್ವನನ್ನು ಕರಾವಳಿ ಕಾವಲು ಪಡೆಯ ಕೆಎನ್‌ಡಿ ಸಿಬ್ಬಂದಿ ರಕ್ಷಿಸಿದ್ದಾರೆ.

ತಲಗೋಡ ಸಾರ್ವಜನಿಕರು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ವಿಸರ್ಜನಾ ಮೆರವಣಿಗೆಯ ಮೂಲಕ ಸಮುದ್ರದಲ್ಲಿ ವಿಸರ್ಜನೆ ಮಾಡುವ ವೇಳೆಯಲ್ಲಿ ಸಮರ್ಥ ಶ್ರೀಧರ ಖಾರ್ವಿ (೧೪) ಎನ್ನುವ ಬಾಲಕ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಾಧರ ಕೆ., ಮಾರ್ಗದರ್ಶನದಲ್ಲಿ ಕೆಎನ್‌ಡಿ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ್ ಖಾರ್ವಿ ತಕ್ಷಣ ಸಮುದ್ರಕ್ಕೆ ಜಿಗಿದು ಬಾಲಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಹಬ್ಬದ ಲೆಕ್ಕದ ವಿಚಾರಕ್ಕೆ ಜಗಳ: ಚಾಕು ಇರಿದು ಯುವಕನ ಕೊಲೆ

ಕಾರವಾರ: ಕಳೆದ ವರ್ಷದ ಗಣೇಶ ಚತುರ್ಥಿ ಹಬ್ಬದ ಲೆಕ್ಕದ ವಿಚಾರವಾಗಿ ಸಹೋದರರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಹಬ್ಬದ ದಿನವೇ ಕೊಲೆಯಲ್ಲಿ ಅಂತ್ಯಕಂಡ ಘಟನೆ ಕಾರವಾರ ನಗರದಲ್ಲಿ ಸಂಭವಿಸಿದೆ.ನಗರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ದುರ್ಘಟನೆ ನಡೆದಿದ್ದು, ಸಂದೇಶ ಪ್ರಭಾಕರ ಬೋರ್ಕರ್ (31) ಎಂಬವನು ಕೊಲೆಯಾದ ದುರ್ದೈವಿ. ಸಂದೇಶನ ಚಿಕ್ಕಪ್ಪನ ಮಗ ಮನೀಶ್ ಬೋರ್ಕರ್ ಚಾಕು ಇರಿದ ಆರೋಪದ ಮೇರೆಗೆ ಆತನನ್ನು ಹಾಗೂ ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರತಿವರ್ಷ ಬೋರ್ಕರ್ ಕುಟುಂಬಸ್ಥರು ಚತುರ್ಥಿಯಂದು ಮನೆಯಲ್ಲಿ ಗಣಪತಿ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ್ ಹಾಗೂ ಮನೋಹರ್ ಬೋರ್ಕರ್ ನಡುವೆ ಕಳೆದ ವರ್ಷ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕಾಚಾರದ ಕುರಿತು ಗಲಾಟೆ ನಡೆದಿದೆ.

ಈ ವಿಚಾರವಾಗಿ ಎರಡೂ ಕುಟುಂಬಸ್ಥರ ಮಕ್ಕಳು ಕೈ ಕೈ ಮಿಲಾಯಿಸಿಕೊಂಡಿದ್ದು, ಗಲಾಟೆ ತಾರಕ್ಕೇರಿದಾಗ ಪ್ರಭಾಕರ್ ಹಿರಿಯ ಮಗ ಸಂದೇಶಗೆ ಮನೋಹರ್ ಅವರ ಕಿರಿಯ ಪುತ್ರ ಚಾಕು ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚಾಕು ಇರಿದ ಮನೀಶ್ ಹಾಗೂ ಆತನಿಗೆ ಸಹಕಾರ ನೀಡಿದವರನ್ನು ಕಾರವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.