ಎಪಿಡಿ ಹಾಗೂ ಆಲದಮರ ಫೌಂಡೇಷನ್ ಕಾರ್ಯಾಚರಣೆಕನ್ನಡ ಪ್ರಭ ವಾರ್ತೆ ಗುರುಮಠಕಲ್:
ಪಟ್ಟಣದ ಬೀದಿ ಬದಿಯಲ್ಲಿ ಆಶ್ರಯವಿಲ್ಲದೆ ಅಲೆದಾಡುತ್ತಿದ್ದ ಇಬ್ಬರು ಮಾನಸಿಕ ಅಸ್ವಸ್ಥರನ್ನು ಎಪಿಡಿ ಹಾಗೂ ಆಲದಮರ ಫೌಂಡೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ರಕ್ಷಿಸಿ, ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಯಿಮ್ಸ್) ಜಿಲ್ಲಾ ಆಸ್ಪತ್ರೆಯಲ್ಲಿರುವ ಆಲದಮರ ಫೌಂಡೇಷನ್‌ನ ‘ಮನೋವೃಕ್ಷ’ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರಕ್ಕೆ ದಾಖಲಿಸಲಾಗಿದೆ.ಎಂಟು ತಿಂಗಳ ಹಿಂದೆ ಇದೇ ರೀತಿಯಾಗಿ ಗುರುಮಠಕಲ್ ಪಟ್ಟಣದ ಇಬ್ಬರು ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಯ ECRC ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ‘ಮರಳಿ ಗೂಡಿಗೆ’ ಪರಿಕಲ್ಪನೆಯಡಿ ಅವರ ಕುಟುಂಬದವರನ್ನು ಪತ್ತೆಹಚ್ಚಿ, ಇಬ್ಬರನ್ನೂ ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಮತ್ತೆ ಇಬ್ಬರು ಬೀದಿ ಬದಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಮತ್ತು ಆರೈಕೆಗಾಗಿ ಕೇಂದ್ರಕ್ಕೆ ಸೇರಿಸಲಾಯಿತು.ಎಪಿಡಿ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಪ್ರಭಾಕರ್ ಬರ್ಕೆ ಮಾತನಾಡಿ, ಬೀದಿ ಬದಿಯಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ನಿರ್ಲಕ್ಷಿಸುವುದು ಅಥವಾ ಅವಮಾನಿಸುವುದು ಮಾನವೀಯತೆಯಲ್ಲ. ಅವರಿಗೆ ಕರುಣೆಯ ಜೊತೆಗೆ ಸೂಕ್ತ ಚಿಕಿತ್ಸೆ, ಪುನರ್ವಸತಿ ಹಾಗೂ ಸುರಕ್ಷಿತ ಆಶ್ರಯ ಒದಗಿಸಬೇಕು. ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಸಲಹೆ, ಚಿಕಿತ್ಸೆ ಮತ್ತು ಬೆಂಬಲ ಪಡೆಯಬೇಕು. ಹೆಚ್ಚಿನ ಮಾಹಿತಿ ಹಾಗೂ ಮಾನಸಿಕ ಆರೋಗ್ಯ ಸಹಾಯಕ್ಕಾಗಿ ಉಚಿತ Tele-MANAS ಸಹಾಯವಾಣಿ 14416ಕ್ಕೆ ಕರೆ ಮಾಡಿ” ಎಂದು ತಿಳಿಸಿದರು.ಕಾರ್ಯಾಚರಣೆಯಲ್ಲಿ ಪಿಐ ಎನ್.ಕೆ ದೌಲತ್, ಎಪಿಡಿ ತಾಲೂಕು ಸಂಯೋಜಕರಾದ ವಿರುಪಾಕ್ಷಿ ಮಾಲಿಪಾಟೀಲ, ಪೊಲೀಸ್ ಸಿಬ್ಬಂದಿ, ಎಪಿಡಿ ಸಂಸ್ಥೆಯ ಸಿಬ್ಬಂದಿ ಶಿಲ್ಪಾ ಎಸ್.,ಶಿಲ್ಪಾ ಎಂ, ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಬಂದೇನವಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.---ಕೋಟ್1--ಬೀದಿ ಬದಿಯ ಮಾನಸಿಕ ಅಸ್ವಸ್ಥರಿಗೆ ಶೀಘ್ರ ಚಿಕಿತ್ಸೆ ಮತ್ತು ಆರೈಕೆ ಒದಗಿಸುವ ಉದ್ದೇಶದಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಯ ವಾರ್ಡ್ ಸಂಖ್ಯೆ 241ರಲ್ಲಿ ಆಲದಮರ ಫೌಂಡೇಷನ್‌ನ ‘ಮನೋವೃಕ್ಷ’ 20 ಹಾಸಿಗೆಗಳ ECRC ಕೇಂದ್ರ ಕಾರ್ಯನಿರ್ವಹಿಸುತ್ತಿದೆ.-ಶೇಖಪ್ಪ ಕಟ್ಟಿಮನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ, ಆಲದಮರ ಫೌಂಡೇಶನ್
----ಫೋಟೊ----ಮಾನಸಿಕ ಅಸ್ವಸ್ಥ