ಭಾರತೀಯ ತತ್ವಜ್ಞಾನದ ಕುರಿತು ಸಂಶೋಧನೆ ಅಗತ್ಯ: ಡಾ. ಜೆಎಸ್‌ ಪಾಟೀಲ್‌

| Published : Mar 05 2024, 01:32 AM IST

ಭಾರತೀಯ ತತ್ವಜ್ಞಾನದ ಕುರಿತು ಸಂಶೋಧನೆ ಅಗತ್ಯ: ಡಾ. ಜೆಎಸ್‌ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ನ್ಯಾಯಶಾಸ್ತ್ರದ ಮೂಲ ಗ್ರಂಥ ಮಿತಾಕ್ಷರವಾಗಿದೆ. ವಿಜ್ಞಾನೇಶ್ವರರ ಮಿತಾಕ್ಷರ ಗ್ರಂಥವು ಯಾಜ್ಞ ವಲ್ಕರ ಸ್ಮೃತಿಯನ್ನಾಧರಿಸಿದೆ. ಹೀಗಾಗಿ ನ್ಯಾಯ ಶಾಸ್ತ್ರಕ್ಕೆ ಯಾಜ್ಞವಲ್ಕ್ಯ ರ ಕೊಡುಗೆ ಅನುಪಮವಾಗಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಗತ್ತಿನಲ್ಲಿಯೇ ಭಾರತದ ಜ್ಞಾನ ಪರಂಪರೆ ಅದ್ಭುತವಾದದ್ದು, ಭಾರತೀಯ ತತ್ವಜ್ಞಾನ ಕುರಿತು ಉನ್ನತ ಮಟ್ಟದಲ್ಲಿ ಸಂಶೋಧನೆಯಾಗಬೇಕಿದೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಜೆ.ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಶ್ರೀವಿಜಯ ಪ್ರಕಾಶನದ ಚೊಚ್ಚಿಲ ಕೃತಿ, ಪತ್ರಕರ್ತ, ಸಾಹಿತಿ ಡಾ. ಶ್ರೀನಿವಾಸ ಸಿರನೂರಕರ್ ರಚಿಸಿದ ಯಾಜ್ಞವಲ್ಕ್ಯ ಸ್ಮತಿ ಅಂದು-ಇಂದು-ಎಂದೆಂದೂ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು,

ಜ್ಞಾನದ ಮುಖೇನ ಭಾರತ ಜಗತ್ತಿನ ದೊಡ್ಡಣ್ಣನಾಗಿ ಹೊರಹೊಮ್ಮುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪತ್ರಕರ್ತ ಸಿರನೂರಕರ್ ಅವರು ರಚಿಸಿದ ಈ ಕೃತಿ ಅದ್ಭುತ ಕೊಡುಗೆ ಕೊಡಬಲ್ಲದು ಎಂದರು.

ಭಾರತೀಯ ನ್ಯಾಯಶಾಸ್ತ್ರದ ಮೂಲ ಗ್ರಂಥ ಮಿತಾಕ್ಷರವಾಗಿದೆ. ವಿಜ್ಞಾನೇಶ್ವರರ ಮಿತಾಕ್ಷರ ಗ್ರಂಥವು ಯಾಜ್ಞ ವಲ್ಕರ ಸ್ಮೃತಿಯನ್ನಾಧರಿಸಿದೆ. ಹೀಗಾಗಿ ನ್ಯಾಯ ಶಾಸ್ತ್ರಕ್ಕೆ ಯಾಜ್ಞವಲ್ಕ್ಯ ರ ಕೊಡುಗೆ ಅನುಪಮವಾಗಿದೆ. ಬ್ರಿಟಿಷರು ರಚಿಸಿದ ಕಾನೂನು ಶಾಸ್ತ್ರದ ಲ್ಲಿ ಯಾಜ್ಞವಲ್ಕರ ಹಾಗೂ ವಿಜ್ಞಾನೇಶ್ವರರು ಹೇಳಿದ್ದೇ ಇದೆ ಎಂದರು.

ಕೇಂದ್ರೀಯ ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ರಾಜೀವ ಜೋಶಿ ಕೃತಿ ಕುರಿತು ಮಾತನಾಡಿ, ಯಾಜ್ಞವಲ್ಕ್ಯ ರ ವಿಜ್ಞಾನ ಕಾಳಜಿಯನ್ನು ಲೇಖಕ ಡಾ. ಶ್ರೀನಿವಾಸ ಸಿರನೂರಕರ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯಾಜ್ಞವಲ್ಕ್ಯರು ಕೇವಲ ಯೋಗಿಗಳಲ್ಲ ಶ್ರೇಷ್ಠ ವಿಜ್ಞಾನಿಗಳಾಗಿದ್ದರು ಎಂದರು..

ಪಂ.ಗೋಪಾಲಾಚಾರ್ಯ ಅಕಮಂಚಿ, ಕೃತಿಯ ಲೇಖಕ ಶ್ರೀನಿವಾಸ ಸಿರನೂರಕರ್, ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡಾ. ಗೌತಮ ಜಾಗಿರದಾರ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ನಾರಾಯಣರಾವ ಜವಳಿ, ಡಾ.ಸುರೇಶ ಹೇರೂರ, ಡಾ.ಕೃಷ್ಣ ಕಾಕಲವಾರ, ನಾರಾಯಣ ಕುಲಕರ್ಣಿ, ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರೊ. ಪರಿಮಳಾ ಅಂಬೇಕರ್, ಶಕುಂತಲಾ ಜೆ.ಎಸ್. ಪಾಟೀಲ್, ಸಂಧ್ಯಾ ಹೊನಗುಂಟಿಕರ್ ಉಪಸ್ಥಿತರಿದ್ದರು.

ಪ್ರಕಾಶನದ ಉಪಾಧ್ಯಕ್ಷ ಜಗನ್ನಾಥ ಉಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಸಂಜೀವ ಸಿರನೂರಕರ್‌ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ವಕೀಲ, ಲಕ್ಷ್ಮಿ ದೇಶಪಂಡೆ ಸ್ವಾಗತಿಸಿದರು. ವೆಂಕಟೇಶ ಮುದಗಲ್ ವಂದಿಸಿದರು. ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು.

ಮನುಸ್ಮೃತಿ ಕುರಿತಾದ ಟೀಕೆ- ಟಿಪ್ಪಣಿಗಳೆಲ್ಲ ಪೂವ್ರಾಗ್ರಹ ಪೀಡಿತ

ಭಾರತೀಯ ಜ್ಞಾನ ಪರಂಪರೆಯ ತತ್ವಗಳನ್ನು ಹಾಗೂ ಅದರ ಸತ್ವವನ್ನು ತುಂಬಿಕೊಂಡಿರುವ ಸ್ಮೃತಿಗಳ ಕುರಿತಾದಂತಹ ಪೂರ್ವಾಗ್ರಹ ಪೀಡಿತ ನಿಲುವುಗಳನ್ನು ಬಿಡಬೇಕು, ಮೊದಲು ಎಲ್ಲರು ಸ್ಮೃತಿಗಳನ್ನು ಒದಬೇಕು, ಅಲ್ಲಿನ ಸಾರ ಸಂಗ್ರಹ ಅರಿಯಬೇಕು, ಅದು ರಚನೆಯಾದ ಕಾಲಘಟ್ಟ, ಅಂದಿನ ಆಚಾರ- ವಿಚಾರಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡೇ ಇವನ್ನು ಓದಬೇಕು. ಸುಖಾ ಸುಮ್ಮನೆ ಅವುಗಳ ಬಗ್ಗೆ ಸಲ್ಲದ ಟೀಕೆಗಳನ್ನು ಮಾಡಬಾರದು ಎಂದು ಅಂಕಣಕಾರ ಡಾ. ಸಿರನೂರಕರ್‌ ಹೇಳಿದರು. ಮನುಸ್ಮೃತಿ ಬಗ್ಗೆ ಅನೇಕರು ಕುಹಕವಾಡುತ್ತಾರೆ, ಅದು ಸರಿಯಾದ ಕ್ರಮವಲ್ಲ, ಮನುವಾದಿಗಳು, ಮನು ಎಂದೆಲ್ಲಾ ಟೀಕೆಗಳನ್ನು ಕೇಳುತ್ತೇವೆ. ಯಾಕೆ ಕೆಲವು ಹೀಗೆ ಮಾಡುತ್ತಾರೆ ಎಂಬುದು ಬಿಡಿಸಿ ಹೇಳಲಾಗದು, ಯಾಕೆಂಬುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಮನು ಸ್ಮೃತಿ ಏನೆಂದು ಓದದವರೂ ಅದನ್ನು ಟೀಕಿಸುತ್ತಾರೆಂದರೆ ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಯಾವುದೂ ಇಲ್ಲವೆಂದರು.