- ಮೈತ್ರಿವನದಲ್ಲಿ ಸಂಶೋಧನೆ-ಸಮಕಾಲೀನ ಆಯಾಮಗಳು ರಾಜ್ಯಮಟ್ಟದ ಕಾರ್ಯಾಗಾರ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಂಶೋಧನೆ ಎಂದರೆ ಕೇವಲ ದತ್ತಾಂಶಗಳ ಸಂಗ್ರಹ ಅಥವಾ ಜೋಡಣೆಯಲ್ಲ. ಅದು ಸ್ಥಾಪಿತ ಗ್ರಹಿಕೆಗಳನ್ನು ಭಗ್ನಗೊಳಿಸಿ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಹಾಗೂ ಸಮಾಜದ ಬಿಡುಗಡೆಗೆ ಹಾದಿ ತೋರಿಸುವ ಜ್ಞಾನವಾಗಬೇಕು ಎಂದು ವಿಮರ್ಶಕ, ಸಾಂಸ್ಕೃತಿಕ ಚಿಂತಕ ಪ್ರೊ. ರಹಮತ್ ತರೀಕೆರೆ ಹೇಳಿದರು.

ನಗರದ ಹೊರವಲಯದ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ, ಸಂಶೋಧನೆ-ಸಮಕಾಲೀನ ಆಯಾಮಗಳು ಎಂಬ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಪ್ರಸ್ತುತ ಭಾರತವು ಧರ್ಮ, ಭಾಷೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಮಾನುಷ ಸಮಾಜವಾಗಿ ಮಾರ್ಪಡುತ್ತಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಅವರ ವೈಚಾರಿಕ ಕ್ರಾಂತಿಯ ಸಂದೇಶಗಳು ಅತ್ಯಗತ್ಯವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಹಾಗೂ ನೊಂದವರಲ್ಲಿ ಜಾಗೃತಿ ಮೂಡಿಸಲು ಸಚಿವ ಸತೀಶ ಜಾರಕಿಹೊಳಿ ಅವರು ಈ ವೇದಿಕೆ ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಸಂಶೋಧನಾ ಮಾರ್ಗದರ್ಶನದ ಕೆಲಸವನ್ನು ಇಂದು ವೇದಿಕೆಯು ರಾಜ್ಯದ ಯುವ ಸಂಶೋಧಕರನ್ನು ಒಗ್ಗೂಡಿಸಿ ಮಾಡುತ್ತಿದೆ ಎಂದರು.

ಶಿಬಿರದ ಸಂಚಾಲಕ ಡಾ.ವಿಜಯಕುಮಾರ ಎಚ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಜಾತಿ ಮತ್ತು ಧರ್ಮದ ಜಾಢ್ಯದಿಂದ ಹೊರಬಂದು, ಭಾರತೀಯ ಸೌಹಾರ್ದ ಪರಂಪರೆಯನ್ನು ಮರುಕಟ್ಟುವ ಕಾರ್ಯದ ಕನಸನ್ನು ಹೊಸ ಸಂಶೋಧಕರಲ್ಲಿ ಬಿತ್ತಲು ಈ ಶಿಬಿರ ಆಯೋಜನೆ ಮಾಡಿದ್ದೇವೆ ಎಂದರು.

ಸಮಾರಂಭದಲ್ಲಿ ಡಾ.ಫಕೀರೇಶ ಹಳ್ಳಳ್ಳಿ, ಡಾ.ನಾಗರಾಜ ಎನ್., ಡಾ.ಮದಕರಿ ನಾಯಕ, ಡಾ.ರೂಪೇಶ್ ಕುಮಾರ್, ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಭೀಮಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಲಾವಿದ ಎಸ್ ಹನುಮಂತಪ್ಪ ಕರೂರು ಅವರು ಭೀಮಗೀತೆ ಹಾಡಿದರು. ಟಿ.ಆರ್. ತಿಪ್ಪೇಸ್ವಾಮಿ ಅತಿಥಿ ಪರಿಚಯ ಮಾಡಿದರು. ಸಂತೋಷ ಕುಮಾರ್ ಬಿ.ಪಿ. ನಿರೂಪಿಸಿ, ಸಚಿನ್ ಜಿ.ಎಚ್. ಸ್ವಾಗತಿಸಿ, ಮಹಾಂತೇಶ ವಂದಿಸಿದರು.

- - -

(ಬಾಕ್ಸ್‌) * ಅಹಂಕಾರ ಬಿಟ್ಟು ವಿನಯವಂತರಾಗಿ

ಸಂಶೋಧನೆಯಲ್ಲಿ ತೊಡಗುವ ಹೊಸ ತಲೆಮಾರಿನ ಯುವಕರು ಅಹಂಕಾರ ಬಿಟ್ಟು ವಿನಯವಂತಿಕೆ ಬೆಳೆಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರ ಸಂಶೋಧನಾ ಜ್ಞಾನವೇ ಸಮಾಜದ ಮುಕ್ತಿಗೆ ದಾರಿಯಾಗಿದೆ. ಇಂದು ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣ ಆಗುತ್ತಿವೆ. ಪ್ರಾಧ್ಯಾಪಕರ ಕೊರತೆ ಎದುರಾಗಿದೆ. ಇಂತಹ ದುಸ್ಥಿತಿಗೆ ತಳ್ಳುತ್ತಿರುವ ಪ್ರಭುತ್ವದ ಕರಾಳತೆಯನ್ನು ಪ್ರಶ್ನಿಸುವ ಮನೋಭಾವ ಸಂಶೋಧಕರು ಬೆಳೆಸಿಕೊಳ್ಳಬೇಕು ಎಂದು ಪ್ರೊ.ರಹಮತ್‌ ಸಲಹೆ ನೀಡಿದರು.

- - -

-27HRR.01:

ಹರಿಹರದ ಮೈತ್ರಿವನದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಸಂಶೋಧನಾ ಕಾರ್ಯಾಗಾರವನ್ನು ಪ್ರೊ.ರಹಮತ್ ತರೀಕೆರೆ ಉದ್ಘಾಟಿಸಿದರು. ಪ್ರೊ. ಎ.ಬಿ. ರಾಮಚಂದ್ರಪ್ಪ, ಡಾ. ವಿಜಯಕುಮಾರ ಎಚ್.ಜಿ. ಹಾಗೂ ಇತರರು ಉಪಸ್ಥಿತರಿದ್ದರು.