ಸಾರಾಂಶ
ಗುರುರಾಜ್ ಭಟ್ ಶತಮಾನೋತ್ಸವದ ಅಂಗವಾಗಿ ‘ತುಳುನಾಡಿನ ಇತಿಹಾಸ ಸಂಶೋಧನೆಗೆ ಡಾ. ಗುರುರಾಜ್ ಭಟ್‌ರ ಕೊಡುಗೆಗಳು’ ವಿಷಯದ ಕುರಿತು ಒಂದು ದಿನದ ವಿಚಾರ ಸಂಕೀರ್ಣ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಪೂರ್ಣಪ್ರಜ್ಞ ಕಾಲೇಜು ಇತಿಹಾಸ ವಿಭಾಗ ಮತ್ತು ಸಮಾಜ ವಿಜ್ಞಾನ ಸಂಘ, ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ಗುರುರಾಜ್ ಭಟ್ ಶತಮಾನೋತ್ಸವದ ಅಂಗವಾಗಿ ‘ತುಳುನಾಡಿನ ಇತಿಹಾಸ ಸಂಶೋಧನೆಗೆ ಡಾ. ಗುರುರಾಜ್ ಭಟ್‌ರ ಕೊಡುಗೆಗಳು’ ವಿಷಯದ ಕುರಿತು ಒಂದು ದಿನದ ವಿಚಾರ ಸಂಕೀರ್ಣ ನಡೆಯಿತು.ತುಳುನಾಡಿನ ಹಿರಿಯ ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ, ಆಗಿನ ಕಾಲದಲ್ಲಿ ಡಾ.ಪಿ. ಗುರುರಾಜ್ ಭಟ್ ತುಳುನಾಡಿನ ದೇವಸ್ಥಾನ ಸ್ಮಾರಕಗಳಿಗೆ ಖುದ್ದು ಭೇಟಿ ನೀಡಿ ಅಧ್ಯಯನ ನಡೆಸಿದ್ದಲ್ಲದೆ, ಆ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ. ಅವರು ತುಳುನಾಡಿನ ಶಾಸನಗಳ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿದ್ದಾರೆ. ಇದರೊಂದಿಗೆ ಜಿಲ್ಲೆಯನ್ನಾಳಿದ ಅರಸು ಮನೆತನಗಳ ಬಗ್ಗೆ ಹಾಗೂ ತುಳುನಾಡಿನ ಸಾಮಾಜಿಕ ಮತ್ತು ರಾಜಕೀಯ ಇತಿಹಾಸವನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದರು.ತುಳುನಾಡಿನ ಇತಿಹಾಸದ ವಿಶ್ವಕೋಶ ಎಂದು ಕರೆಯಲ್ಪಡುವ ಡಾ.ಪಿ. ಗುರುರಾಜ್ ಭಟ್ ಅವರ ‘ಸ್ಟಡೀಸ್ ಆಫ್ ತುಳುವ ಹಿಸ್ಟರಿ ಆ್ಯಂಡ್ ಕಲ್ಚರ್’ ಕುರಿತಾಗಿ ಎಂಜಿಎಂ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಡಾ. ಮಾಲತಿ ಕೆ. ಮೂರ್ತಿ ಮಾತನಾಡಿದರು. ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ರಾಮ್‌ದಾಸ್ ಪ್ರಭು, ಗುರುರಾಜ್ ಭಟ್ ಅವರ ‘ತುಳುನಾಡು ಮತ್ತು ಆ್ಯಂಟಿಕ್ಯೂಟಿ ಆಫ್ ಸೌತ್ ಕೆನರಾ’ ಪುಸ್ತಕದ ಕುರಿತಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಯರಾಂ ಶೆಟ್ಟಿಗಾರ್, ಗುರುರಾಜ್ ಭಟ್ಟರ ಸಂಶೋಧನಾ ಲೇಖನಗಳ ಕುರಿತು ಮಾತನಾಡಿದರು.ಕಾರ್ಯಕ್ರಮವನ್ನು ವಿಶ್ವನಾಥ್ ಪಾದೂರು ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ರಾಮು ಎಲ್. ಅಧ್ಯಕ್ಯತೆ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಮಾಹೆಯ ಸಾಂಸ್ಕೃತಿಕ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್ ಕೋಶಾಧಿಕಾರಿ ಪಿ. ಪರಶುರಾಮ್ ಭಟ್ ಹಾಗೂ ಸದಸ್ಯರಾದ ರಘುಪತಿ ರಾವ್ ವಿಚಾರ ಸಂಕೀರ್ಣದಲ್ಲಿ ಇದ್ದರು.ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಮಹೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿದ್ಯಾಶ್ರೀ, ಶ್ರೀರಕ್ಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.