ರಾಮನಗರ: ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯ 120 ಗ್ರಾಪಂಗಳ 958 ಕ್ಷೇತ್ರಗಳಿಂದ ಒಟ್ಟು 1912 ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿದ ಬೆನ್ನಲ್ಲೇ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮಿನಿ ಸಮರ ಎಂದೇ ಬಿಂಬಿತವಾಗಿರುವ ಗ್ರಾಪಂ ಚುನಾವಣೆ ಫಲಿತಾಂಶ, ಮುಂಬರುವ ಎಲ್ಲಾ ಚುನಾವಣೆಗಳಿಗೂ ದಿಕ್ಸೂಚಿಯಾಗಲಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಚುನಾವಣೆ ಚರ್ಚೆಗಳು ನಡೆಯುತ್ತಿದ್ದು, ಸ್ಪರ್ಧಾಕಾಂಕ್ಷಿಗಳಲ್ಲಿ ರಣೋತ್ಸಾಹ ಹೆಚ್ಚಾಗಿದೆ. ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಪರೋಕ್ಷವಾಗಿ ಪ್ರಚಾರ ಚಟುವಟಿಕೆ ಆರಂಭಿಸಿದ್ದಾರೆ.

ಬರದ ನಡುವೆಯೂ ಗ್ರಾಪಂಗಳಿಗೆ ನಿಗದಿಯಾಗಿರುವ ಮೀಸಲು ಹಳ್ಳಿಗಳಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಲೆಕ್ಕಾಚಾರ ಶುರುವಾಗಿದೆ. ಯಾವ ಯಾವ ಕ್ಷೇತ್ರ ಗಳಲ್ಲಿ ನಮ್ಮ ಬಲವಿದೆ. ಎಲ್ಲಿ ನಮ್ಮ ಪ್ರಾಬಲ್ಯ ಕುಂದಿದೆ. ಸಮನಾಂತರ ಪೈಪೋಟಿ ಇರುವ ಕ್ಷೇತ್ರಗಳು ಯಾವುವು. ಗೆಲ್ಲುವ ಅಭ್ಯರ್ಥಿಗಳು ಯಾರು. ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ. ಮಹಿಳಾ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿ ಮಾಡುವುದು. ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವುದು ಹೇಗೆ ಎಂಬೆಲ್ಲಾ ಲೆಕ್ಕಾಚಾರಗಳು ಒಳಗೊಳಗೆ ನಡೆಯುತ್ತಿವೆ.

ತಡೆಯಾಜ್ಞೆ ತರುವ ಪ್ರಯತ್ನ:

ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಭಾವವಿಲ್ಲದ ಪಂಚಾಯ್ತಿ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನಾಗಿ ಮಾಡಿದೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಕಾಂಗ್ರೆಸ್ ವಿರುದ್ಧ ಹಲವು ಆಕಾಂಕ್ಷಿಗಳು ಸಿಟ್ಟಿಗೆದ್ದಿದ್ದಾರೆ. ಚುನಾವಣೆ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಪ್ರಯತ್ನವನ್ನೂ ನಡೆಸಿದ್ದಾರೆನ್ನಲಾಗಿದೆ.


ಮಹಿಳಾ ಕ್ಷೇತ್ರಗಳಲ್ಲೂ ಚುನಾವಣೆಗೆ ಸ್ಪರ್ಧಿಸಲು ಕುಟುಂಬದವರ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಅತ್ತೆ-ಸೊಸೆ, ಅಣ್ಣ-ತಮ್ಮ, ಅಕ್ಕ- ತಂಗಿ, ನಾದಿನಿ, ಚಿಕ್ಕಪ್ಪ- ದೊಡ್ಡಪ್ಪ... ಹೀಗೆ ಸಂಬಂಧಿಗಳೇ ನೇರ ಎದುರಾಳಿಗಳಾಗುವ ಸಾಧ್ಯತೆಗಳೂ ಇವೆ. ಪ್ರಭಾವವಿರುವವರು ಮೀಸಲು ಕ್ಷೇತ್ರಗಳಲ್ಲಿ ಆ ಸಮುದಾಯದವರನ್ನು ಕಣಕ್ಕಿಳಿಸಿ ಗೆಲ್ಲಿಸಿ ಪ್ರತಿಷ್ಠೆ ಉಳಿಸಿಕೊಳ್ಳುವ ಪ್ರಯತ್ನದಲ್ಲೂ ತೊಡಗಿದ್ದಾರೆ.

ಪರೋಕ್ಷವಾಗಿ ಚುನಾವಣಾ ಪ್ರಚಾರ:

ಚುನಾವಣೆಗಳಿಗೆ ಸ್ಪರ್ಧಿಸಲು ಸಜ್ಜಾಗಿರುವ ಆಕಾಂಕ್ಷಿಗಳು ತಮ್ಮನ್ನು ಗೆಲ್ಲಿಸಿದರೆ ಪಂಚಾಯಿತಿ ಅಭಿವೃದ್ಧಿಗೆ ನೀಡುವ ಕೊಡುಗೆಗಳ ಪಟ್ಟಿಯನ್ನೇ ಜನರ ಮುಂದಿಡುತ್ತಿದ್ದಾರೆ. ಈಗಿನಿಂದಲೇ ಮನೆಮನೆಗಳಿಗೆ ಎಡತಾಕುತ್ತಾ, ಅಲ್ಲಲ್ಲಿ ಊರಿನವರಿಗೆ ಗುಂಡು-ತುಂಡು ಪಾರ್ಟಿಗಳನ್ನು ಏರ್ಪಡಿಸುತ್ತಾ, ಹಬ್ಬದ ಹೆಸರಿನಲ್ಲಿ ದೇಣಿಗೆ ನೀಡುತ್ತಾ ಚುನಾವಣೆ ಗೆಲ್ಲಲು ಎಲ್ಲಾ ರಣತಂತ್ರಗಳನ್ನೂ ಅನುಸರಿಸುತ್ತಿದ್ದಾರೆ.

ಶಾಸಕರು, ಮಾಜಿ ಶಾಸಕರಿಂದ ಅವಲೋಕನ:

ವಿಧಾನಸಭೆ ಚುನಾವಣೆ ಇನ್ನು ಒಂದೂವರೆ ವರ್ಷ ಇರುವುದರಿಂದ ಶಾಸಕರು, ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿತರೂ ಕೂಡ ಪಂಚಾಯ್ತಿಗಳಲ್ಲಿ ಸಂಚರಿಸಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಗೆಲ್ಲುವ ಅಭ್ಯರ್ಥಿಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಬಹುಪಾಲು ಪಂಚಾಯಿತಿಗಳನ್ನು ಅತಿಕ್ರಮಿಸಿಕೊಂಡು 2028ರ ವಿಧಾನಸಭೆ ಚುನಾವಣೆ ವೇಳೆಗೆ ಪಂಚಾಯಿತಿಗಳಲ್ಲಿ ಹಿಡಿತ ಸಾಧಿಸುವ ಗುರಿಯೊಂದಿಗೆ ಹಲವರು ಮುನ್ನಡೆದಿದ್ದಾರೆ.

ಅನ್ಯ ಕ್ಷೇತ್ರಗಳತ್ತ ಗಮನ:

ಮೀಸಲು ಕ್ಷೇತ್ರಗಳಿಂದ ಸ್ಪರ್ಧೆಯಿಂದ ವಂಚಿತರಾದವರು ಅನ್ಯಕ್ಷೇತ್ರಗಳನ್ನು ಹುಡುಕಿಕೊಂಡು ಅಲ್ಲಿ ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಸಂಬಂಧಿಕರು, ಸ್ನೇಹಿತರು ಹೆಚ್ಚಾಗಿರುವ ಕ್ಷೇತ್ರಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಮೀಸಲು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಗೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್ ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಆನಂತರ ಚುನಾವಣಾ ಕಾರ್ಯಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಳ್ಳಲಿದೆ.

ಬಾಕ್ಸ್‌.............

ಕಾಂಗ್ರೆಸ್‌-ಜೆಡಿಎಸ್ ನಡುವೆ ನೇರ ಹಣಾಹಣಿ

ರಾಮನಗರ:

ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಜೆಡಿಎಸ್ - ಕಾಂಗ್ರೆಸ್ ನಡುವೆ ನೇರ ಸೆಣಸಾಟ ಇದ್ದೇ ಇರುತ್ತದೆ. ಹಿಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದ ಬಿಜೆಪಿ ಅಲ್ಲಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತಿದ್ದು, ಇದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಬೆಂಗಳೂರು ದಕ್ಷಿಣ ಜಿಲ್ಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕರ್ಮ ಭೂಮಿಯಾಗಿದೆ. ಹೀಗಾಗಿ ಪ್ರತಿ ಚುನಾವಣೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಇದೀಗ ಗ್ರಾಪಂ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ನಡೆಯದೇ ಇದ್ದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆ ಪಕ್ಷದ ನಾಯಕರು ಹಲ ಕ್ಷೇತ್ರಗಳ ಮೀಸಲಾತಿಯನ್ನು ಬದಲಾಯಿಸಿ ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡದಂತೆ ಪ್ರಯತ್ನಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್- ಬಿಜೆಪಿಯವರು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರೆ, ಪ್ರತಿಷ್ಠೆಯಾಗಿ ಪರಿಗಣಿಸಿದವರು ಮೀಸಲು ರದ್ದತಿ ಕೋರಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಇದರಿಂದ ಹಲವು ಗ್ರಾಮ ಪಂಚಾಯಿತಿ ಕ್ಷೇತ್ರದ ಚುನಾವಣೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಕಾಂಗ್ರೆಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಕೂಟ ಒಂದಾಗಿ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳಾಗಿ ಪ್ರಬಲರನ್ನು ಕಣಕ್ಕಿಳಿಸಿ ಕೈ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವುದಕ್ಕೆ ತಂತ್ರಗಾರಿಕೆ ನಡೆಸಲಾಗುತ್ತಿದೆ. ಸ್ಪರ್ಧೆಗೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾದವರನ್ನು ತಮ್ಮತ್ತ ಸೆಳೆದುಕೊಂಡು ಕಣಕ್ಕಿಳಿಸುವ ಪ್ರಯತ್ನಗಳನ್ನು ಮೈತ್ರಿ ಪಕ್ಷದ ಮುಖಂಡರು ನಡೆಸುತ್ತಿದ್ದಾರೆ. ಬಿಜೆಪಿ ಬಲವಿರುವ ಪಂಚಾಯಿತಿ ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಅವರಿಗೆ ಶಕ್ತಿ ತುಂಬುತ್ತಿದ್ದಾರೆ.

ಬಾಕ್ಸ್ ...............

ನೆಲಮಂಗಲ ತಾಲೂಕಿನ ಪಾಲಾದ 5 ಗ್ರಾಪಂ!

ಈ ಮೊದಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ವ್ಯಾಪ್ತಿಯಲ್ಲಿದ್ದ ಸೋಲೂರು ಹೋಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಕೊಂಡಿದೆ. ಹೀಗಾಗಿ ಸೋಲೂರು ಹೋಬಳಿ ವ್ಯಾಪ್ತಿಯಲ್ಲಿದ್ದ ಬಾಣವಾಡಿ, ಬಿಟ್ಟಸಂದ್ರ, ಗುಡೇಮಾರನಹಳ್ಳಿ, ಲಕ್ಕೇನಹಳ್ಳಿ ಹಾಗೂ ಮೋಟಗೊಂಡನಹಳ್ಳಿ ಗ್ರಾಪಂಗಳು ನೆಲಮಂಗಲ ತಾಲೂಕಿಗೆ ಸೇರ್ಪಡೆಯಾಗಿವೆ.

ಬಾಕ್ಸ್‌.......

ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಪಂಗಳ ಪ್ರಾದೇಶಿಕ ಕ್ಷೇತ್ರಗಳ ಸದಸ್ಯ ಸ್ಥಾನಗಳ ವಿವರ

ತಾಲೂಕುಗ್ರಾಪಂ ಸಂಖ್ಯೆಕ್ಷೇತ್ರ ಸಂಖ್ಯೆಒಟ್ಟು ಸದಸ್ಯ ಸ್ಥಾನಗಳು

ಮಾಗಡಿ26160361

ಕನಕಪುರ31282524

ಹಾರೋಹಳ್ಳಿ11114186

ರಾಮನಗರ20187359

ಚನ್ನಪಟ್ಟಣ32215482

ಒಟ್ಟು1209581912