ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಕಾನೂನು ಅಧ್ಯಯನ ಮಾಡಿ ಕಾನೂನಿನ ವ್ಯಾಪ್ತಿಯಲ್ಲಿ ಸಮಾಜಕ್ಕೆ ಯಾವ ರೀತಿಯ ಸಹಾಯ ಮಾಡಲು ಸಾಧ್ಯವಿದೆ ಎಂಬುದನ್ನು ಸರ್ಕಾರ ಪರಾಮರ್ಶಿಸಲಿದೆ. ಕಾನೂನು ಯಾರ ಕೈಯಲ್ಲೂ ಇಲ್ಲ. ಅದಕ್ಕೆ ತನ್ನದೇ ಆದ ಚೌಕಟ್ಟಿದೆ. ಅದರ ಇತಿಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಲವು ಹೋರಾಟ ಮಾಡಿದ ಯತ್ನಾಳಗೆ ಮೀಸಲಾತಿ ಕೊಡಿಸುವುದಕ್ಕೆ ಆಗಲಿಲ್ಲ. ಈ ಹಿಂದೆ ಅವರದೆ ಸರ್ಕಾರ ಇತ್ತು. ಏನು ಮಾಡಿದರು? ಮೂರು ದಿನದಲ್ಲಿ ಮೀಸಲಾತಿ ಕೊಡುವುದಕ್ಕೆ ಬರುವುದಿಲ್ಲ. ಕಾನೂನು ನಮ್ಮ ಕೈಯಲ್ಲಿ ಇಲ್ಲ. ಅದರ ಚೌಕಟ್ಟಿನಲ್ಲಿ ಮೀಸಲಾತಿ ನೀಡಲಾಗುವುದು. ರಾಜಕೀಯ ಭಾಷಣದಿಂದ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶ ವಿರೋಧಿ ಚಟುವಟಿಕೆ ಯಾರೇ ಮಾಡಲಿ ಅವರ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.ಮುಜರಾಯಿ ಇಲಾಖೆಯಿಂದ ದೇವಾಲಯಗಳು ಮುಕ್ತವಾಗಬೇಕೆಂಬ ಮಂತ್ರಾಲಯ ಶ್ರೀಗಳ ಹೇಳಿಕೆ ವಿಚಾರವಾಗಿ ಮಾತನಾಡಿ, ಅದಕ್ಕೆಲ್ಲ ಉತ್ತರ ಕೊಡಲು ಬರುವುದಿಲ್ಲ. ಅದು ಸಾರ್ವಜನಿಕ ವಿಚಾರ. ಸರ್ಕಾರಕ್ಕೆ ಸಂಬಂಧವಿಲ್ಲ. ಎಲ್ಲಾ ದೇವಾಲಯಗಳು ಸ್ವತಂತ್ರವಾಗಿವೆ. ಕೆಲವು ದೇವಾಲಯಗಳು ಮಾತ್ರ ಸರ್ಕಾರದ ಅಧೀನದಲ್ಲಿವೆ. ಹಲವು ದೇವಾಲಯಗಳು ಟ್ರಸ್ಟ್ ಮುಖಾಂತರ ನಡೆಯುತ್ತವೆ ಎಂದು ಹೇಳಿದರು.
ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಹಾಕಿದ ಆರೋಪ ವಿಚಾರ ಕುರಿತು ಪ್ರಸ್ತಾಪಿಸಿ, ನಾವು ಗೋಕಾಕ, ಅಥಣಿಯಲ್ಲಿ ಕುಳಿತು ಏನು ಹೇಳುವುದು?ಅವರು ಜಾಗೃತವಾಗಿ ಇರಬೇಕಿತ್ತು. ನಮ್ಮಲ್ಲಿ ಇಂತಹ ಯಾವುದಾದರೂ ಘಟನೆ ಕಂಡು ಬಂದರೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದರು.
ಶಾಸಕ ಮುನಿರತ್ನ ಪ್ರಕರಣದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಹೀಗೆ ಬೈಯ್ರಿ ಎಂದು ಯಾರೂ ಹೇಳಿಲ್ಲ. ಅವರು ಬೈಗುಳವನ್ನು ನಾಡಿನ ಜನರು ನೋಡಿದ್ದಾರೆ. ಅವರ ಮೇಲೆ ದೂರು ಬಂದಿರುವುದರಿಂದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪರಾಧ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಮಾನ ಮಾಡಲಿದೆ. ರಾಜ್ಯಪಾಲರು ಕೆಂಪಣ್ಣ ಆಯೋಗದ ವರದಿ ಕೇಳಿದ್ದರ ಕುರಿತು ಪ್ರತಿಕ್ರಿಯಿಸಿ ಸರ್ಕಾರ ರಾಜ್ಯಪಾಲರಿಗೆ ವರದಿ ನೀಡಲಿದೆ. ಅದರಲ್ಲೇನೂ ವಿಶೇಷತೆ ಇಲ್ಲವೆಂದು ಹೇಳಿದರು.ಬೆಳಗಾವಿ ರಾಜಕೀಯದಲ್ಲಿನ ಸಮನ್ವಯ ಕೊರತೆ ಕುರಿತು ಮಾತನಾಡಿ, ಇಲ್ಲಿ ಯಾವುದೇ ಸಮನ್ವಯ ಕೊರತೆಯೇ ಇಲ್ಲ. ಇಲ್ಲಿರುವುದು ಕಾಂಗ್ರೆಸ್ ಪಕ್ಷ ಒಂದೇ. ಪಾರ್ಟಿ ಬಂದರೆ ಎಲ್ಲವೂ ಒಂದೇ ಎಂದರು.
ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಆಗಿದೆ ಎಂಬ ಚರ್ಚೆ ಬಗ್ಗೆ, ಎಲ್ಲರಿಗೂ ಟೈಮ್ ಬರುತ್ತದೆ. ಸರಿಯಾದ ಸಮಯಕ್ಕೆ ಎಲ್ಲರೂ ಕಾಯಬೇಕು. ರಾಜಕೀಯದಲ್ಲಿ ಕಾಯಬೇಕು. ಅಥಣಿಯಲ್ಲಿ ಗಜಾನನ ಮಂಗಸೂಳಿ, ಸದಾಶಿವ ಬುಟಾಳೆ ಪಾತ್ರ ಹೆಚ್ಚಿದೆ. ಗಜಾನನ ಮಂಗಸೂಳಿ ಅವರಿಗೆ ರಾಜಕೀಯ ಅವಕಾಶ ಮತ್ತೊಮ್ಮೆ ಬರುತ್ತದೆ ಎಂದ ಅವರು, ಶಾಸಕ ಸವದಿ ನಮ್ಮಿಂದ ಯಾಕೆ ದೂರ ಎಂಬುದು ನಿಮಗೆ ಗೊತ್ತಿದ್ದೆ. ಜನರ ಕೆಲಸ ಬಂದ್ರೆ ಕೆಲಸವನ್ನು ಮಾಡುತ್ತೇವೆ ಎಂದರು.ಜಿಲ್ಲೆ ಮತ್ತು ಸ್ಥಳೀಯ (ಅಥಣಿ) ಕಾಂಗ್ರೆಸ್ ಪಕ್ಷದಲ್ಲಿ ಸಮನ್ವಯ ಕೊರತೆಯ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಸಮನ್ವಯ ಕೊರತೆ ಇಲ್ಲ. ಎಲ್ಲರೂ ಒಂದೇ. ನಾವೆಲ್ಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷದ ಕೆಲಸ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಾವೆಲ್ಲ ಜನರ ಕೆಲಸ ಮಾಡಿಕೊಡುತ್ತೇವೆ. ಯಾವ ಪಕ್ಷ, ವ್ಯಕ್ತಿ ಎಂದು ನೋಡದೆ ಎಲ್ಲ ಪಕ್ಷದ ಜನರು ಬಂದು ಕೆಲಸ ಮಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸದಾಶಿವ ಬುಟಾಳೆ, ಗಜಾನನ ಮಂಗಸೂಳಿ, ಸುರೇಶ ಪಾಟೀಲ(ಶೇಗುಣಸಿ), ಅಸಲಾಮ್ ನಾಲಬಂದ, ರಮೇಶ ಸಿಂದಗಿ, ಸುನೀಲ ಸಂಕ ಇದ್ದರು.ಚಿಕ್ಕೋಡಿ ಹೊಸ ಜಿಲ್ಲೆ ರಚನೆಗೆ ಒತ್ತು ನೀಡಿದ್ದೇನೆ. ಸರ್ಕಾರದ ಮೇಲೂ ಒತ್ತಡ ಹಾಕಿದ್ದೇನೆ. ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ನನಗೂ ಆಸೆ ಇದೆ. ಅಥಣಿ ಜಿಲ್ಲೆ ಮಾಡಲು ಆಗುವುದಿಲ್ಲ. ಕೃಷ್ಣಾ ನದಿ ಪ್ರವಾಹ ಬೆಳೆಹಾನಿ ಸರ್ವೆ ಕೆಲಸ ಭರದಿಂದ ನಡೆದಿದೆ. ಸರ್ವೆ ಮುಗಿದ ತಕ್ಷಣ ಪರಿಹಾರ ವಿತರಿಸಲಾಗುವುದು. ಕಬ್ಬು ವಾಣಿಜ್ಯ ಬೆಳೆಯಾಗಿರುವುದರಿಂದ ಅದರ ಹಾನಿಗೆ ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ,-ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ