ಪಟ್ಟಣದ 14ನೇ ವಾರ್ಡ್‌ನ ಮಸ್ಕಿ ಪ್ಲಾಟಿನ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲಸೌಲಭ್ಯಗಳ ಕೊರತೆ ಅನುಭವಿಸುತ್ತಿದ್ದು, ಈ ನಡುವೆ ಲೇಔಟ್ ಮಾಲೀಕರು ಮತ್ತು ನಿವಾಸಿಗಳ ನಡುವಿನ ಕಾನೂನು ತಕರಾರಿನಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುತ್ತಿವೆ.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣದ 14ನೇ ವಾರ್ಡ್‌ನ ಮಸ್ಕಿ ಪ್ಲಾಟಿನ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲಸೌಲಭ್ಯಗಳ ಕೊರತೆ ಅನುಭವಿಸುತ್ತಿದ್ದು, ಈ ನಡುವೆ ಲೇಔಟ್ ಮಾಲೀಕರು ಮತ್ತು ನಿವಾಸಿಗಳ ನಡುವಿನ ಕಾನೂನು ತಕರಾರಿನಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುತ್ತಿವೆ.

ಗುರುವಾರ ಬೆಳಗ್ಗೆ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಆರಂಭಿಸಲು ಪಟ್ಟಣ ಪಂಚಾಯಿತಿಯವರು ಮುಂದಾದಾಗ ಲೇಔಟ್ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ಕೂಡ ಜರುಗಿತು. ಪರಿಸ್ಥಿತಿ ತೀವ್ರಗೊಂಡು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ಹಿಂದೆ ಪಟ್ಟಣ ಪಂಚಾಯತಿಯಾಗುವ ಮೊದಲು ಗ್ರಾಮ ಪಂಚಾಯಿತಿ ಆಡಳಿತದ ಅವಧಿಯಲ್ಲಿ ಯಾವುದೇ ಎನ್ಎ (ಕೃಷಿಯೇತರ) ಅನುಮತಿ ಪಡೆಯದೆ ಗುಂಟಾ ಪ್ಲಾಟುಗಳಾಗಿ ಭೂಮಿಯನ್ನು ವಿಭಜಿಸಿ ಸಾರ್ವಜನಿಕರಿಗೆ ಸೈಟುಗಳನ್ನು ಮಾರಾಟ ಮಾಡಲಾಗಿದೆ. ಕಾಲಕ್ರಮೇಣ ಆ ಸೈಟುಗಳನ್ನು ಖರೀದಿಸಿದ ಜನರು ತಮ್ಮ ಜೀವನದ ಸಂಪಾದನೆ ಹೂಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ವರ್ಷಗಳಿಂದ ಇಲ್ಲಿ ನೂರಾರು ಕುಟುಂಬಗಳು ವಾಸ ಇವೆ. ತೆರಿಗೆ, ವಿದ್ಯುತ್ ಬಿಲ್ ಸೇರಿದಂತೆ ಹಲವು ಸರ್ಕಾರಿ ಶುಲ್ಕಗಳನ್ನು ಪಾವತಿಸುತ್ತಾ ಬಂದಿದ್ದಾರೆ. ಆದರೆ ಸದ್ಯ ಸರ್ವೇ ನಂ.7ಎ/1, 7ಎ/3 ಮತ್ತು 7ಎ2/ಬಕ್ಕೆ ಸಂಬಂಧಿಸಿದ ಜಮೀನು ಮಾಲೀಕರ ಮಧ್ಯ ತಕರಾರು ತೀವ್ರಗೊಂಡಿದ್ದು ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಕೇಸು ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ರೀತಿ ಕಾಮಗಾರಿ ನಡೆಸಬಾರದು ಎಂಬುದು ಜಮೀನು ಮಾಲೀಕರ ವಾದ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಿವಾಸಿಗಳು, ನಾವು ಕಾನೂನುಬದ್ಧವಾಗಿ ಸೈಟುಗಳನ್ನು ಖರೀದಿಸಿದ್ದೇವೆ. ಮನೆ ಕಟ್ಟಿಕೊಂಡು ವರ್ಷಗಳಿಂದ ಬದುಕುತ್ತಿದ್ದೇವೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ ಎಂಬುದು ನಮ್ಮ ಮೂಲಭೂತ ಹಕ್ಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಭೇಟಿ ನೀಡಿ ಕಾಮಗಾರಿ ಪ್ರಾರಂಭಿಸಲು ಮುಂದಾದರು. ಜಮೀನು ಮಾಲೀಕರು ಇದಕ್ಕೆ ಜಗ್ಗದೇ ತಡೆ ಹಿಡಿದ ಕಾರಣ ಬಂದ ದಾರಿಗೆ ಸುಂಕ ಇಲ್ಲ ಎಂದು ಅಧಿಕಾರಿ ವಾಪಸಾದರು. ಒಂದೆಡೆ ನ್ಯಾಯಾಲಯದ ವಿಚಾರ, ಮತ್ತೊಂದೆಡೆ ನಾಗರಿಕರ ಒತ್ತಡ - ಎರಡರ ನಡುವೆ ಸಮತೋಲನ ಸಾಧಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಸ್ಥಳೀಯ ನಾಗರಿಕರು, ಈ ಸಮಸ್ಯೆಗೆ ನಾವು ಕಾರಣರಲ್ಲ. ಅಕ್ರಮವಾಗಿ ಲೇಔಟ್ ಮಾಡಿರುವವರ ಮೇಲೆ ಕ್ರಮ ಜರುಗಿಸಿ, ಸಾಮಾನ್ಯ ನಿವಾಸಿಗಳಿಗೆ ಸೌಲಭ್ಯ ನಿರಾಕರಿಸಬಾರದು ಎಂದು ಒತ್ತಾಯಿಸಿದ್ದಾರೆ.

ನಮ್ಮ ಬೇಡಿಕೆ ಕೂಡಲೇ ಈಡೇರಿಸಿ: ನಿವಾಸಿಗಳ ಆಗ್ರಹ

ನಾವು ಈ ಗುಂಟಾ ಸೈಟುಗಳನ್ನು ಹಣ ಕೊಟ್ಟು ಖರೀದಿ ಮಾಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಇಲ್ಲೇ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸವಿದ್ದೇವೆ. ತೆರಿಗೆ, ವಿದ್ಯುತ್ ಬಿಲ್ ಎಲ್ಲವೂ ಪಾವತಿ ಮಾಡುತ್ತಿದ್ದೇವೆ. ನ್ಯಾಯಾಲಯದಲ್ಲಿ ಕೇಸ್‌ ಇದೆ ಎನ್ನುವ ಕಾರಣ ಹೇಳಿ ಕಾಮಗಾರಿ ನಿಲ್ಲಿಸುವುದು ಸರಿಯಲ್ಲ. ಕೇಸ್‌ ಜಮೀನು ಮಾಲೀಕರ ನಡುವೆ ಇದ್ದರೆ ಅದರ ಹೊರೆ ನಮಗೇಕೆ? ಲೇಔಟ್ ರೂಪಿಸಿದವರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಸಾಮಾನ್ಯ ಜನರು ಇಲ್ಲಿ ಬದುಕುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಇದ್ದಾರೆ. ನೀರಿಲ್ಲದೆ, ರಸ್ತೆಯಿಲ್ಲದೆ ನಾವು ಹೇಗೆ ಜೀವನ ಸಾಗಿಸಬೇಕು? ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾಡಳಿತ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಾವು ಮೂಲಸೌಲಭ್ಯ ಕಲ್ಪಿಸಲು ಮನವಿ ಸಲ್ಲಿಸಿದ್ದೇವೆ. ಕಾನೂನು ಮಿತಿಯೊಳಗೆ ಉಳಿದುಕೊಂಡೇ ಮೂಲಸೌಲಭ್ಯ ಒದಗಿಸಬೇಕು. ನಿವಾಸಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಬಾರದು ಎಂಬುದೇ ನಮ್ಮ ಬೇಡಿಕೆ. ಕನಿಷ್ಠ ಕುಡಿಯುವ ನೀರು, ಚರಂಡಿ, ರಸ್ತೆ ವ್ಯವಸ್ಥೆ ನಮಗೆ ಕೂಡಲೇ ಬೇಕು ಎಂದು ನಿವಾಸಿಗಳಾದ ಸಂಗಪ್ಪ ಹವಾಲ್ದಾರ, ಅಂಬುದಾಸ ಪೇಟಕರ್, ವೀರೇಶ ದಲಾಲಿ, ಪ್ರಕಾಶ ಚಳಗೇರಿ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.