ಜನರ ಹಿತ ಕಾಪಾಡಿ ಇಲ್ಲ ರಾಜೀನಾಮೆ ಕೊಡಿ

| Published : Apr 06 2025, 01:50 AM IST

ಸಾರಾಂಶ

ಬೆಲೆ ಏರಿಕೆ ಪರಿಣಾಮ ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದು ಜನತೆಯ ಹಿತಕ್ಕನುಗುಣವಾಗಿ ಸರ್ಕಾರ ನಡೆಸಿ ಇಲ್ಲವಾದರೆ ರಾಜೀನಾಮೆ ನೀಡಿ ರಾಜ್ಯ ಬಿಟ್ಟು ತೊಗಲಿ ಎಂದು ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಬೆಲೆ ಏರಿಕೆ ಪರಿಣಾಮ ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದು ಜನತೆಯ ಹಿತಕ್ಕನುಗುಣವಾಗಿ ಸರ್ಕಾರ ನಡೆಸಿ ಇಲ್ಲವಾದರೆ ರಾಜೀನಾಮೆ ನೀಡಿ ರಾಜ್ಯ ಬಿಟ್ಟು ತೊಗಲಿ ಎಂದು ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಶನಿವಾರ ತಾಲೂಕು ಭಾರತೀಯ ಜನತಾಪಕ್ಷದ ವತಿಯಿಂದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಚಳ್ಳಕರೆ ರಸ್ತೆ ಮುೂಲಕ ಪ್ರತಿಭಟನಾ ಮೆರವಣಿಗೆ ತೆರಳಿ ಇಲ್ಲಿನ ಎಸ್‌ಎಸ್‌ಕೆ ವೃತ್ತದಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಧೋರಣೆ ಖಂಡಿಸಿ, ಜನತೆಗೆ ಮೋಸಮಾಡಬೇಡಿ ಎಂದು ಘೋಷಣೆ ಮೊಳಗಿಸಿದರು. ಈ ವೇಳೆ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ದೊಡ್ಡಹಳ್ಳಿ ಆಶೋಕ್‌ ಮಾತನಾಡಿ, ರಾಜ್ಯ ಸರ್ಕಾರವು ದಿನ ನಿತ್ಯ ಬಳಕೆ ವಸ್ತುಗಳ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿರುವ ಪರಿಣಾಮ ಜನಸಾಮಾನ್ಯರಿಗೆ ಭಾರಿ ಹೊರೆಯಾಗುತ್ತಿದೆ. ಹಾಲಿನ ದರ ಏರಿಕೆ, ವಿದ್ಯುತ್ ದರ ಹಾಗೂ ದಿನವಹಿ ವಸ್ತುಗಳ ಮೇಲಿನ ಬೆಲೆ ಏರಿಕೆ ಸೇರಿದಂತೆ ಸಾರಿಗೆ ಬಸ್ ಟಿಕೆಟ್ ದರ, ಡೀಸೆಲ್ ಪ್ರೆಟ್ರೋಲ್‌ ಬೆಲೆ, ರೆವಿನ್ಯೂ ಇ-ಸ್ಟಾಂಪ್ ಬೆಲೆ ಏರಿಕೆಯ ಪರಿಣಾಮ ರಾಜ್ಯದ ಜನತೆಗೆ ಸಾಕಷ್ಟು ಸಮಸ್ಯೆಗಳಿಗಿಡಾಗಿದ್ದಾರೆ. ಇಂತಹ ಭ್ರಷ್ಟ ಸರ್ಕಾರದ ನಮಗೆ ಬೇಕಿತ್ತೇ ಎಂದು ಪ್ರಶ್ನಿಸಿದರು. ಮತಗಳಿಕೆ ಹಿನ್ನಲೆಯಲ್ಲಿ ಗ್ಯಾರಂಟಿಗಳಿಗೆ ಹಣ ಒದಗಿಸಲು ಸಾಧ್ಯವಾಗದ ಈ ಸರ್ಕಾರ ಬೆಲೆ ಏರಿಕೆಗೆ ಮುಂದಾಗಿ ಜನತೆಯಿಂದ ಹಣ ಲೋಟಿ ಮಾಡುತ್ತಿದೆ. ಗ್ರಾಮೀಣ ಸಂಪರ್ಕ ಹಾಗೂ ಪ್ರಧಾನ ರಸ್ತೆಗಳು ಹಾಳಾಗಿದ್ದು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಕೆಲಸವಿಲ್ಲದೇ ಕಚೇರಿಗಳಲ್ಲಿ ಸೊಳ್ಳೆ ಹಾಗೂ ನೊಣ ಹೊಡೆಯುತ್ತಿದ್ದಾರೆಂದು ಆರೋಪಿಸಿದರು.

ಮುಸ್ಲಿಂಮರಿಗೆ ನೀಡಿರುವ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 4% ಧರ್ಮ ಆಧಾರಿತ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿದ್ದು ಇದು ಸಂವಿದಾನ ಹಾಗೂ ಹಿಂದೂ ವಿರೋಧಿ ನೀತಿಯಾಗಿದೆ. ದರ ಏರಿಕೆಗಳನ್ನು ಕೂಡಲೇ ರದ್ದುಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕು ಬಿಜೆಪಿಯ ಹಿರಿಯ ಮುಖಂಡ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ, ರಾಜ್ಯದ ಜನತೆಗೆ ದಿಕ್ಕು ತಪ್ಪಿಸಿ ಮತಗಳಿಕೆಯ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹಣ ಒದಗಿಸಲು ಎಡಗೈನಲ್ಲಿ ಕೊಟ್ಟು ಬಲಗೈಯಿನಲ್ಲಿ ಹಣ ಲೋಟಿ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ನೀತಿ ಅನುಸರಿಸುವ ಮೂಲಕ ಎಸ್‌ಸಿ ಎಸ್‌ಟಿ ಪ್ರಗತಿಗೆ ಮೀಸಲಿದ್ದ ಸಾವಿರಾರು ಕೋಟಿ ಹಣ ಲೋಟಿ ಮಾಡಿ ವಂಚಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶೋತ್ತರಗಳನ್ನೆ ಬದಲಾಯಿಸಲು ಕಾಂಗ್ರೆಸ್‌ ಮುಂದಾಗಿದೆ ಎಂದು ಅರೋಪಿಸಿದರು.

ಕೆಎಸ್‌ಆರ್‌ಟಿ ಹಳೇ ಬಸ್‌ಗಳನ್ನು ರಸ್ತೆಗೆ ಬಿಟ್ಟಿದ್ದು ಒಂದು ಸೀಟು ಸಹ ಸರಿಯಾಗಿಲ್ಲ. ಹಳೇ ಟೈರುಗಳ ಸಾರಿಗೆ ಬಸ್‌ಗಳು ಎಲ್ಲಂದರಲಿಯೇ ಕೆಟ್ಟು ನಿಲ್ಲುತ್ತಿವೆ. ಇಂತಹ ಅವಘಡಗಳ ಸಿಎಂ ಸಿದ್ದರಾಮಯ್ಯ ಸರ್ಕಾರದ ಅಗತ್ಯವಿದೆಯೇ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಗುಡುಗಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಪಾವಗಡ ರವಿ ಮಾತನಾಡಿ,ರಾಜ್ಯದಲ್ಲಿ ಅತ್ಯಂತ ಭ್ರಷ್ಟಚಾರ ಆಡಳಿತದಲ್ಲಿದ್ದು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಪದೇಪದೇ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಯ ರಕ್ತ ಹೀರುತ್ತಿದ್ದಾರೆ. ಇಂತಹ ನೀತಿಗೆಟ್ಟ ಸರ್ಕಾರಕ್ಕೆ ಬುದ್ದಿಕಲಿಸುವ ಸಮಯ ಹತ್ತಿರಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದರು. ಎತ್ತಿನಹೊಳೆ ಭದ್ರಾಮೇಲ್ದಂಡೆ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ಬಂದಿದ್ದ ಯೋಜನೆಗಳಾಗಿವೆ. ಕಾಂಗ್ರೆಸ್‌ ಅವಧಿಯಲ್ಲಿ ಯಾವುದೇ ಪ್ರಗತಿ ಯೋಜನೆಗಳು ಜಾರಿಗೆ ಬಂದಿಲ್ಲ. ಪುರಸಭೆಯಲ್ಲಿ ಸಾಕಷ್ಟು ಭ್ರಷ್ಟಚಾರ ನಡೆಯುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಲ್ಲಿ ವಿಫಲವಾಗಿದೆ. 23ವಾರ್ಡ್‌ಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲ.ಮೊನ್ನೆ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮಾಸಿಕ ಬಾಡಿಕೆ ಹೆಚ್ಚಿಸುವ ಮೂಲಕ ಮುಂಗಡದ ಹೆಸರಿನಲ್ಲಿ ಹಣ ಲೋಟಿ ಮಾಡಿದ ಪರಿಣಾಮ ಹರಾಜಿಜುನಲ್ಲಿ ಭಾಗವಹಿಸಿದ್ದ ತನ್ನದಾಗಿಸಿಕೊಂಡ ಮಳಿಗೆ ಮಾಲೀಕರಿಗೆ ತೀವ್ರ ಹೊರೆಯಾಗಿದೆ ಎಂದು ಅರೋಪಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಹಾಗೂ ತಾ,ಬಿಜೆಪಿ ಮುಖಂಡ ದಮ್ಮತಮರಿ ಕೃಷ್ಣಪ್ಪ, ನೇರಳೇಕುಂಟೆ ಅಂಜಿಗೌಡ ಮೊದಲಾದವರು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದೇ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾವಗಡದ ಮುರಳೀ, ರಂಗಸಮುದ್ರ ಮಹಾಲಿಂಗಪ್ಪ, ವೆಂಕಟಾಪುರ ಈಶ್ವರಪ್ಪ, ಪ್ರಸಾದ್‌ ಬಾಬು, ಜಗನ್ನಾಥಪ್ಪ, ಚಂದ್ರಪ್ಪ ಹನುಮಂತರಾಯಪ್ಪ ಹಾಗೂ ಇತರೆ ಅನೇಕ ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.