ಕನ್ನಡಪ್ರಭ ವಾರ್ತೆ, ತುಮಕೂರುಸಚಿವ ಸ್ಥಾನ ಸಿಗದೇ ಇರುವುದಕ್ಕೆ ಹಲವಾರು ಶಾಸಕರು ಬೇಸರಗೊಂಡಿರುವ ಬೆನ್ನಲ್ಲೇ ಕೆ.ಎಸ್.ಆರ್. ಟಿ ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದರು. ರಾಜಕೀಯದ ಹೊಸ ಪಾಠ ಈಗ ಅರ್ಥ ಆಗುತ್ತಿದೆ. ಅವಕಾಶ ಸಿಗುತ್ತದೆ ಎಂದುಕೊಂಡಿದ್ದೆ. ಈಗ ಎಲ್ಲವೂ ಮೀರಿ ಹೋಗಿದೆ. ಪ್ರಾಮಾಣಿಕತೆಗೆ ಬೆಲೆ ಎಷ್ಟಿದೆ ಎನ್ನುವುದು ಗೊತ್ತಾಗಿದೆ. ರಾಜಕೀಯ ಡಬಲ್ ಗೇಮ್, ಮೋಸದಿಂದ ಕೂಡಿದೆ. ನಮ್ಮ ಜಿಲ್ಲೆಗೆ ಇನ್ನೊಂದು ಸ್ಥಾನ ಕೊಡಬಹುದಿತ್ತು ಎಂದ ಅವರು ನಮಗೆ ಗಾಡ್ ಫಾದರ್ ಇರಲಿಲ್ಲ. ಹಾಗಾಗಿ ಸಚಿವ ಸ್ಥಾನ ತಪ್ಪಿದೆ. ಇನ್ನು ಒಂದೂವರೆ ವರ್ಷ ಸಮಯ ಇದೆ. ಕಾರ್ಯಜಕರ್ತರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.

ಕೆ.ಎಸ್.ಆರ್ ಟಿ‌ಸಿ ನಷ್ಟದಲ್ಲಿ ಇದೆ. ಏನೂ ಸಾಧನೆ ಮಾಡಲು ಆಗುವುದಿಲ್ಲ. ಹಾಗಾಗಿ ನಾನೂ ಬುಧವಾರ ಹೋಗಿ ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು. ರಾಜಕೀಯದಲ್ಲಿ ನಮ್ಮಂತ ಸಾಮಾನ್ಯ ರೈತರ ಮಗ ಮೇಲೆ ಬರುವುದು ಕಷ್ಟ. ಯಾರ ತಲೆ ಹೊಡೆದು ಹಣ ಸಂಪಾದನೆ ಮಾಡಿರಬೇಕು ಅಂಥವರು ಮೇಲಕ್ಕೆ ಬರುತ್ತಾರೆ ಎಂದ ಅವರು ಕಿತ್ತಾಡಿ ತೆಗೆದುಕೊಳ್ಳೋಕ್ಕೆ ಅದೇನು ನಮ್ಮ ಅಪ್ಪನ ಆಸ್ತಿ ಅಲ್ಲ ಎಂದರು.