ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಗೌರವ ಸೂಚಿಸಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1996 ರಿಂದಲೇ ಚುನಾವಣಾ ಆಯೋಗದ ನಿಯಮದಂತೆ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುತ್ತಾ ಬಂದಿದ್ದು, ಈ ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲೂ ಇದೇ ಪದ್ಧತಿ ಅನುಸರಿಸಲಾಗಿದೆ. ತಮ್ಮ ಚುನಾವಣೆಯಲ್ಲೂ ನಾಮನಿರ್ದೇಶಿತ ಸದಸ್ಯರ ಮತಗಳು ಚಲಾವಣೆಯಾಗಿದೆ. ಅದರ ಆಧಾರದ ಮೇಲೆಯೇ ಗೆಲುವು ಸಾಧಿಸಿದ್ದೇನೆ ಎಂದರು.ಆದರೆ ಇತ್ತೀಚೆಗೆ ಉಚ್ಚ ನ್ಯಾಯಾಲಯ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಕಾನೂನಿಗೆ ಗೌರವ ಸೂಚಿಸಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಇಷ್ಟು ವರ್ಷಗಳಿಂದ ಇದೇ ವ್ಯವಸ್ಥೆ ಜಾರಿಯಲ್ಲಿದ್ದಾಗ ಈಗ ನನ್ನೊಬ್ಬರ ಮೇಲೆಯೇ ಈ ಕಾನೂನು ಅನ್ವಯವಾಗಿರುವುದು ಏಕೆ ಎಂಬ ಪ್ರಶ್ನೆ ಇದೆ. ಆದರೂ ಎಲ್ಲರಿಗೂ ಕಾನೂನು ಒಂದೇ ಎಂಬ ಕಾರಣಕ್ಕೆ ನ್ಯಾಯಾಲಯದ ಆದೇಶ ಗೌರವಿಸಿದ್ದೇನೆ. ಈ ವಿಷಯ ಈಗ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ಸಂಬಂಧಪಟ್ಟವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಲಿ ದ್ದಾರೆ. ಅಂತಿಮ ತೀರ್ಪಿನ ಆಧಾರದ ಮೇಲೆ ಮುಂದಿನ ನಿರ್ಧಾರವಾಗಲಿದೆ ಎಂದು ಹೇಳಿದರು.
ಈ ಬೆಳವಣಿಗೆಯಿಂದ ವೈಯಕ್ತಿಕವಾಗಿ ನೋವಾಗಿದೆ. ಆದರೆ ನ್ಯಾಯಾಂಗದ ಬಗ್ಗೆ ಅಥವಾ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
2014ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, 2021ರಲ್ಲೂ ಮರು ಆಯ್ಕೆಯಾದೆ. ಈ ಬಾರಿಯೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದ್ದರೂ ಕೇವಲ ಆರು ಮತಗಳ ಅಂತರದಿಂದ ಜಯ ಸಾಧಿಸಿದೆ ಎಂದರು.ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಯಾರ ಮನಸ್ಸಿಗೂ ನೋವಾಗದಂತೆ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ಆತ್ಮತೃಪ್ತಿ ಇದೆ. ತಮ್ಮ ಕಾರ್ಯವೈಖರಿ ಹಾಗೂ ಪಕ್ಷದ ಮೇಲಿನ ನಿಷ್ಠೆ ಗುರುತಿಸಿ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಯಂತಹ ಮಹತ್ವದ ಜವಾಬ್ದಾರಿ ಪಕ್ಷ ನೀಡಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಪುಟ್ಟಸ್ವಾಮಿ, ದಿನೇಶ್ ಕೋಟೆ, ಪ್ರೇಮ್ ಕುಮಾರ್ ಹಾಗೂ ಕಲ್ಮರಡಪ್ಪ ಉಪಸ್ಥಿತರಿದ್ದರು.