ಸಾರಾಂಶ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಇಲ್ಲಿನ ದೊಡ್ಡಬಸವೇಶ್ವರ ದೇವಸ್ಥಾನದ ರಾಜಗೋಪುರದ ಮಾದರಿಯಲ್ಲಿ ಮೂರು ದಿಕ್ಕುಗಳಲ್ಲಿ ಬೃಹತ್ ಗೋಪುರಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿಯೇ ಮಾದರಿ ದೇವಸ್ಥಾನ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಕುರುಗೋಡು
ಐತಿಹಾಸಿಕ ಹಿನ್ನೆಲೆ ಹೊಂದಿರುವ ಇಲ್ಲಿನ ದೊಡ್ಡಬಸವೇಶ್ವರ ದೇವಸ್ಥಾನದ ರಾಜಗೋಪುರದ ಮಾದರಿಯಲ್ಲಿ ಮೂರು ದಿಕ್ಕುಗಳಲ್ಲಿ ಬೃಹತ್ ಗೋಪುರಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿಯೇ ಮಾದರಿ ದೇವಸ್ಥಾನ ಮಾಡಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.ಇಲ್ಲಿನ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನಕ್ಕೆ ಈ ಮೊದಲು ವಾರ್ಷಿಕ ₹೫ ಲಕ್ಷ ಮಾತ್ರ ಆದಾಯ ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಆದಾಯ ₹೧ ಕೋಟಿ ದಾಟಿರುವುದು ಉತ್ತಮ ಬೆಳವಣಿಗೆ. ತುಂಗಭದ್ರಾ ಅಭಿವೃದ್ಧಿ ಮಂಡಳಿಯ ಸುಪರ್ದಿಯಲ್ಲಿರುವ ರೈತ ಭವನವನ್ನು ಅತಿಶೀಘ್ರದಲ್ಲಿ ದೇವಸ್ಥಾನದ ಸುಪರ್ದಿಗೆ ತಂದು ನಿತ್ಯ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದರು.ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಶಾಶ್ವತವಾಗಿ ಉಳಿಯುತ್ತವೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಕುರುಗೋಡು ಉತ್ಸವ ಆಯೋಜಿಸಲು ಮುಖ್ಯಮಂತ್ರಿಗಳಲ್ಲಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ಚಾನಾಳು ಆನಂದ ಮಾತನಾಡಿ, ಶಾಸಕರು, ಸದಸ್ಯರು ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಕೊಟ್ಟೂರು ಸಂಸ್ಥಾನ ವಿರಕ್ತಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ನರಸಪ್ಪ, ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಮುಖಂಡರಾದ ಕೆ.ಎ. ರಾಮಲಿಂಗಪ್ಪ ಮತ್ತು ಚಿದಾನಂದಪ್ಪ ಇದ್ದರು.ವ್ಯವಸ್ಥಾಪನಾ ಸಮಿತಿ ಸದಸ್ಯರು:
ಅಧ್ಯಕ್ಷರಾಗಿ ಚಾನಾಳು ಆನಂದ, ಹೂಗಾರ್ ಮಲ್ಲಿಕಾರ್ಜುನ (ಪ್ರಧಾನ ಅರ್ಚಕ), ಕಾಮುರ್ತಿ ಗಿರೀಶ್, ಸರ್ನಾಡಗೌಡರ ಸಿದ್ದನಗೌಡ, ಕಗ್ಗಲ್ ಬಸವರಾಜ, ಸಿ.ಪಲ್ಲವಿ, ಜಿ. ನಾಗರತ್ನ ಮತ್ತು ಸಿ.ಪವನಕುಮಾರಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.