ಸರ್ವರ್ ಸಮಸ್ಯೆಯಿಂದಾಗಿ ಬಡವರು ಹಾಗೂ ಬಿಪಿಎಲ್ ಪಡಿತರ ಚೀಟಿದಾರರು ಪಡಿತರ ಪಡೆಯಲು ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ, ಅವಧಿಯನ್ನು ವಿಸ್ತರಿಸಿ ಎಂದು ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ವರ್ ಸಮಸ್ಯೆಯಿಂದಾಗಿ ಬಡವರು ಹಾಗೂ ಬಿಪಿಎಲ್ ಪಡಿತರ ಚೀಟಿದಾರರು ಪಡಿತರ ಪಡೆಯಲು ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ, ಅವಧಿಯನ್ನು ವಿಸ್ತರಿಸಿ ಎಂದು ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅರ್ಹ ಕುಟುಂಬ ಪಡಿತರದಿಂದ ವಂಚಿತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಕಳೆದ ಎರಡು ದಿನಗಳಿಂದ ಪಡಿತರ ವಿತರಣಾ ವ್ಯವಸ್ಥೆಯ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಪಡಿತರ ವಿತರಿಸಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಕಾಯುವ ಬಡವರು, ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಪಡಿತರ ಪಡೆಯದೆ ಮನೆಗೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಕೇಂದ್ರ ಸರ್ಕಾರದ ಪಿಎಂಜಿಕೆಎವೈ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುತ್ತಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯದಿರುವುದು ಗಂಭೀರ ವಿಚಾರವಾಗಿದೆ. ಸರ್ವರ್ ಸಮಸ್ಯೆ ಸರ್ಕಾರದ ತಾಂತ್ರಿಕ ಲೋಪದಿಂದ ಉಂಟಾಗಿದ್ದರೆ ಅದರ ಹೊರೆ ಬಡ ಫಲಾನುಭವಿಗಳ ಮೇಲೆ ಹಾಕಬಾರದು ಎಂದರು.
ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ಹೆಚ್ಚುವರಿ ಸಮಯ ನೀಡಿ ಪಡಿತರ ಪಡೆಯಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಅಂತಹ ಫಲಾನುಭವಿಗಳ ಪಡಿತರವನ್ನು ಮುಂದಿನ ತಿಂಗಳಿಗೆ ಕಾಯ್ದಿರಿಸುವ (ಕ್ಯಾರಿ ಫಾರ್ವರ್ಡ್) ವ್ಯವಸ್ಥೆ ಮಾಡಬೇಕು. ತಾಂತ್ರಿಕ ಸಮಸ್ಯೆಯಿಂದ ಪಡಿತರ ಪಡೆಯಲಾಗದ ಕಾರಣಕ್ಕೆ ಯಾವುದೇ ಅರ್ಹ ಬಿಪಿಎಲ್ ಕಾರ್ಡ್‌ನ್ನು ನಿಷ್ಕ್ರಿಯಗೊಳಿಸಬಾರದು ಅಥವಾ ರದ್ದುಪಡಿಸಬಾರದು ಎಂದು ಆಗ್ರಹಿಸಿದರು.ಬಡವರ ಆಹಾರದ ಹಕ್ಕಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ಈ ತಿಂಗಳ ಪಡಿತರದಿಂದ ಯಾವುದೇ ಅರ್ಹ ಕುಟುಂಬ ವಂಚಿತವಾಗದಂತೆ ರಾಜ್ಯ, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಉಡಿಗಾಲ, ಕಾನೂನು ಸಲಹೆಗಾರ ಮಹದೇವಸ್ವಾಮಿ ಗಟವಾಡಿ, ಕಾರ್ಯದರ್ಶಿ ವೀರಭದ್ರಸ್ವಾಮಿ ಬೂದಂಬಳ್ಳಿ ಇದ್ದರು.