ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ತಾಂತ್ರಿಕ ಅಡೆತಡೆಗಳು ಇರಬಾರದು. ಫಲಾನುಭವಿಗಳ ಬ್ಯಾಂಕ್ ಸಂಬಂಧಿತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು.
ಕುಂದಗೋಳ:
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ತಾಂತ್ರಿಕ ಅಡೆತಡೆಗಳು ಇರಬಾರದು. ಫಲಾನುಭವಿಗಳ ಬ್ಯಾಂಕ್ ಸಂಬಂಧಿತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ತಾಪಂ ಇಒ ರಿತಿಕಾ ವರ್ಮಾ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ ಸಭೆಯಲ್ಲಿ ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಆಗುತ್ತಿರುವ ಕೆಲವು ತಾಂತ್ರಿಕ ಅಡಚಣೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೂಪಾ ಬೊಳ್ಳೊಳ್ಳಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಸದಸ್ಯರು, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರವಾಗಿ ಸಮಸ್ಯೆ ಪರಿಹಸಲು ನಿರ್ದೇಶಿಸಿದರು.ಹೆಸ್ಕಾಂ ವಿರುದ್ಧ ಆಕ್ರೋಶ:
ಹೆಸ್ಕಾಂನ ಕಾರ್ಯವೈಖರಿ ಕುರಿತು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಹಳ್ಳಿಗಳಲ್ಲಿ ಮೀಟರ್ ಅಳವಡಿಸಲು ಗುತ್ತಿಗೆದಾರರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ, ಹೆಸ್ಕಾಂನ ಹಿರಿಯ ಅಧಿಕಾರಿಗಳು ಸಭೆಗೆ ಗೈರಾಗುತ್ತಿರುವ ಕುರಿತು ದೂರುಗಳು ಕೇಳಿ ಬಂದಾಗ, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಇಒ ಎಚ್ಚರಿಸಿದರು.ಹೊಸ ಪಡಿತರ ಚೀಟಿಗೆ ಲಂಚ:
ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲನೆ ವೇಳೆ, ಹೊಸ ರೇಷನ್ ಕಾರ್ಡ್ ಮಾಡಿಕೊಡುವ ನೆಪದಲ್ಲಿ ಹಳ್ಳಿಗಳಲ್ಲಿ ಏಜೆಂಟ್‌ರು ₹5 ರಿಂದ ₹6 ಸಾವಿರ ಲಂಚ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸಮಿತಿ ಸದಸ್ಯರು ಮಾಡಿದರು. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಮಾತನಾಡಿ, ಗ್ಯಾರಂಟಿ ಯೋಜನೆಗಳಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ತಾಪಂ ಇಒ ಜಗದೀಶ ಕಮ್ಮಾರ, ಸಮಿತಿ ಸದಸ್ಯರಾದ ಅಡಿವೆಪ್ಪ ಹೆಬಸೂರ, ಶಂಕ್ರಪ್ಪ ಹಡಪದ, ಯಲ್ಲಪ್ಪ ಸಿಂಗಣ್ಣವರ, ವೆಂಕಣ್ಣ ಸಂಶಿ, ಸೋಮಶೇಖರ ಹೊಸಮನಿ, ಸಚಿನ ಪೂಜಾರ, ಗೀತಾ ಕೊಟಿಗೌಡ್ರ, ಬಸಮ್ಮ ಸುಳ್ಳಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.