ಧಾರವಾಡ:
ಭಾರತದ ಚಾರಿತ್ರಿಕ ಘನತೆಗೆ ಧಕ್ಕೆ ಉಂಟು ಮಾಡಿರುವ ಭ್ರಷ್ಟಾಚಾರವು ರಾಷ್ಟ್ರದ ಸಾಧನಾ ಪಥಕ್ಕೆ ಕಾಲ್ತೊಡಕಾಗಿದ್ದು, ದೇಶವನ್ನು ಮುನ್ನಡೆಸಲಿರುವ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪಿಸಬೇಕೆಂದು ಲೇಖಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.ಮಂಗಳವಾರ ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಗರದ ಸಿ.ವಿ. ರಾಮನ್ ಪಿಯು ಕಾಲೇಜು ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಚರಿತ್ರೆಹೀನರಾಗದೆ ಒಳ-ಹೊರಗನ್ನು ಓರಣವಾಗಿಟ್ಟುಕೊಂಡು ಮುನ್ನಡೆಯಬೇಕು ಎಂದರು.
ಪೊಲೀಸ್ ಅಧಿಕಾರಿ ಗಿರೀಶ ಜುಂಜುರಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಅನ್ವೇಷಣೆಗಳತ್ತ ಮುಖಮಾಡಿ ಸ್ಪರ್ಧಾತ್ಮಕ ಜಗತ್ತನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ವ್ಯಾಸಂಗದ ವಿಧಾನ ರೂಪಿಸಿಕೊಂಡಾಗ ಮಾತ್ರ ಎಲ್ಲ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಂಪಾದಿಸಬಹುದು ಎಂದು ಸಲಹೆ ನೀಡಿದರು.ಶಿಕ್ಷಣ ಚಿಂತಕ ಡಾ. ಸತೀಶ ಜಾಧವ ಮಾತನಾಡಿದರು. ಪ್ರಾಚಾರ್ಯ ಅನುರಾಧಾ ಆರಾಧ್ಯಮಠ ಮಾತನಾಡಿ, ವಿದ್ಯಾರ್ಥಿಗಳ ವ್ಯಾಸಂಗದ ಕ್ಷಣಗಳೆಲ್ಲವೂ ಒಂದು ತಪಸ್ಸು ಇದ್ದಂತೆ. ಅನ್ಯಥಾ ವಿಚಾರಗಳಿಗೆ ಕಿವಿಗೊಡದೇ ಕೇವಲ ಅಧ್ಯಯನದ ವಿಚಾರಗಳಲ್ಲಿ ಆಸಕ್ತಿವಹಿಸಿದರೆ ನಿರೀಕ್ಷಿತ ಮೇರು ಫಲಿತಾಂಶ ನಿಮ್ಮದಾಗುತ್ತದೆ ಎಂದರು.
ಆಡಳಿತಾಧಿಕಾರಿ ದುಂಡಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಾರುತಿ ಕದಂ, ಪ್ರೇಮಾ ಎಸ್., ಬಸವರಾಜ ಇದ್ದರು. ಎಸ್.ಎಂ. ಸಿದ್ಧಾರ್ಥ ಸ್ವಾಗತಿಸಿದರು. ಸ್ನೇಹಾ ಕಂಠಿ ಹಾಗೂ ಕಾವ್ಯಶ್ರೀ ಮಡಿವಾಳರ ನಿರೂಪಿಸಿದರು. ಉಪನ್ಯಾಸಕಿ ತನುಜಾ ವಂದಿಸಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.