ಬೋಧಕೇತರ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕ ಸತೀಶ ಸೈಲ್ ಅವರೊಂದಿಗೆ ಚರ್ಚೆ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಲ್ಲಿಗೆ ತೆರಳಲು ಸಮಯ ನಿಗದಿಪಡಿಸಲಾಗುವುದು

ಅಂಕೋಲಾ: ಬೋಧಕೇತರ ಸಿಬ್ಬಂದಿ ಸಮಸ್ಯೆ ಸಾಕಷ್ಟಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಸಂಘವನ್ನು ರಚಿಸಿ ಎಲ್ಲರೂ ಒಂದಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ನಿಮ್ಮ ಬೇಡಿಕೆಗಳಿಗೆ ನಾವು ಸದಾ ಸ್ಪಂದನೆ ನೀಡುತ್ತೇವೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಸಭಾಭವನದಲ್ಲಿ ಉಕ ಜಿಲ್ಲಾ ಅನುದಾನಿತ ಮತ್ತು ಅನುದಾನರಹಿತ ಬೋಧಕೇತರ ನೌಕರರ ಸಂಘ ಉದ್ಘಾಟಿಸಿ ಅವರು ಮಾತನಾಡಿ, ಸಾಕಷ್ಟು ಜನರಿಗೆ ಕೆಲವು ನಿಯಮಗಳಿಂದ ತೊಂದರೆಯಾಗಿರಬಹುದು. ಆದರೆ ಎಲ್ಲರನ್ನು ನಾವು ಸಮಾನವಾಗಿ ಕಾಣುತ್ತೇವೆ. ನಮ್ಮಿಂದಾದ ಸಹಾಯವನ್ನು ನೀಡಲಾಗುವುದು ಎಂದರು.

ಉಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಟಿ. ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೋಧಕೇತರ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕ ಸತೀಶ ಸೈಲ್ ಅವರೊಂದಿಗೆ ಚರ್ಚೆ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಲ್ಲಿಗೆ ತೆರಳಲು ಸಮಯ ನಿಗದಿಪಡಿಸಲಾಗುವುದು ಎಂದರು.

ಅಧ್ಯಕ್ಷತೆವಹಿಸಿದ ಬೋಧಕೇತರ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ದಾಮೋದರ ಜಿ. ನಾಯ್ಕ ಮಾತನಾಡಿ, ಅನುದಾನಿತ ಪ್ರೌಢಶಾಲೆಗಳಲ್ಲಿ 1995ರಿಂದ ನಿವೃತ್ತಿ ಮೂಲಕ ಖಾಲಿ ಇರುವ ಡಿ ದರ್ಜೆಯ ನೌಕರರನ್ನು ಆಡಳಿತ ಮಂಡಳಿಯು ನೇಮಕ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲ 34 ಹುದ್ದೆಗಳನ್ನು ಸರ್ಕಾರದ ವೇತನಕ್ಕೆ ಒಳಪಡಿಸಬೇಕು. ಕಳೆದ 20-25 ವರ್ಷಗಳಿಂದ ಸರ್ಕಾರ ವೇತನವಿಲ್ಲದೇ ಸಂಸ್ಥೆಯವರು ನೀಡಿದ ವೇತನವನ್ನು ಮಾತ್ರ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೇ ಸರ್ಕಾರ ಈಗಾಗಲೇ ವೇತನಕ್ಕೆ ಒಳಪಡಿಸುವ ಕುರಿತು ಭರವಸೆ ಸಮಿತಿ ಮೂಲಕ ಮಾಹಿತಿ ಕೇಳಿದೆ. ಈ ಎಲ್ಲ ಮಾಹಿತಿಯನ್ನು ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಶಾಸಕರ ನೇತೃತ್ವದಲ್ಲಿ ಬಗೆಹರಿಸುವಂತಾಗಬೇಕು ಎಂದರು.

ಕೆನರಾ ವೆಲ್‌ಫರ್ ಟ್ರಸ್ಟ್ ಆಡಳಿತಾಧಿಕಾರಿ ರವೀಂದ್ರ ಕೇಣಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಂಟ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಡಿಇಡಿ ಪ್ರಾಚಾರ್ಯ ಚಂದ್ರಕಾಂತ ನಡಕೆಮನೆ, ರಾಜ್ಯ ಸಂಚಾಲಕ ವಿಶ್ವನಾಥ ಬೆಂಗಳೂರು ಮಾತನಾಡಿದರು.

ಸಂಘದ ಅಧ್ಯಕ್ಷ ಸಂತೋಷ ಗೌಡ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಮಡಿವಾಳ ವಂದಿಸಿದರು. ಉಪಾಧ್ಯಕ್ಷ ಉದಯ ಗಾಂವಕರ, ಕಾರ್ಯದರ್ಶಿ ವಿವೇಕಾನಂದ ಮಡಿವಾಳ, ಖಜಾಂಚಿ ಉದಯ ಗೋಕರ್ಣ ಉಪಸ್ಥಿತರಿದ್ದರು.