ಕೋಳಿ ಸಾಕಾಣಿಕೆದಾರರಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಸಾಕಾಣಿಕೆ ವೆಚ್ಚವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿರುವ ಖಾಸಗಿ ಕಂಪನಿಗಳ ವಿರುದ್ಧ ನ.೨೫ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಾಸಕ ಕೊತ್ತೂರು ಜಿ. ಮಂಜುನಾಥ್ರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಕೋಳಿ ಸಾಕಾಣಿಕೆದಾರರಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಸಾಕಾಣಿಕೆ ವೆಚ್ಚವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿರುವ ಖಾಸಗಿ ಕಂಪನಿಗಳ ವಿರುದ್ಧ ನ.೨೫ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಾಸಕ ಕೊತ್ತೂರು ಜಿ. ಮಂಜುನಾಥ್ರಿಗೆ ಮನವಿ ಸಲ್ಲಿಸಿದರು.ಸಂಘದ ಪದಾಧಿಕಾರಿಗಳು ಮಾತನಾಡಿ, ಕೋಳಿ ಸಾಕಾಣಿಕೆಗೆ ಅಗತ್ಯವಾದ ಕೂಲಿ, ವಿದ್ಯುತ್, ಔಷಧ, ಆಹಾರ ಹಾಗೂ ಸಲಕರಣೆಗಳ ಬೆಲೆ ನಿರಂತರವಾಗಿ ಏರಿಕೆಯಾಗಿರುವುದರಿಂದ ರೈತರಿಗೆ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆಗೆ ಸುಮಾರು ೧೫ ರು. ವೆಚ್ಚವಾಗುತ್ತಿದೆ. ಆದರೆ ಖಾಸಗಿ ಇಂಟಿಗ್ರೇಷನ್ ಕಂಪನಿಗಳು ಪ್ರಸ್ತುತ ಪ್ರತಿ ಕೆ.ಜಿಗೆ ಕೇವಲ ೬.೨೦ ರು. ಮಾತ್ರ ಪಾವತಿಸುತ್ತಿದ್ದು, ಇದರಿಂದ ಸಾಕಾಣಿಕೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಸಾಕಾಣಿಕೆ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಕನಿಷ್ಠ ದರವನ್ನು ಪ್ರತಿ ಕೆ.ಜಿಗೆ ರು. ೨೦ಕ್ಕೆ ಹೆಚ್ಚಿಸುವಂತೆ ರೈತರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕಿ ರೂಪಾ ಶಶಿಧರ್ ಅವರ ಒತ್ತಾಯದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳ ನೇತೃತ್ವದಲ್ಲಿ ರೈತರು ಮತ್ತು ಖಾಸಗಿ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಿ, ಸಾಕಾಣಿಕೆ ವೆಚ್ಚವನ್ನು ಪರಿಷ್ಕರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಪ್ರತಿ ಕೆ.ಜಿಗೆ ೧೦.೪೬ ರು. ಪಾವತಿಸಲು ನಿರ್ಧರಿಸಿದ್ದರೂ, ಆರು ತಿಂಗಳು ಕಳೆದರೂ ಕಂಪನಿಗಳು ಸರ್ಕಾರದ ಆದೇಶ ಪಾಲಿಸದೆ ಹಳೆಯ ದರವನ್ನೇ ನೀಡುತ್ತಿವೆ ಎಂದು ಆರೋಪಿಸಿದರು.ಸರ್ಕಾರದ ನಿರ್ದೇಶನದಂತೆ ಪರಿಷ್ಕೃತ ಸಾಕಾಣಿಕೆ ವೆಚ್ಚವನ್ನು ಕೂಡಲೇ ಜಾರಿಗೊಳಿಸಬೇಕು. ಕುಕ್ಕುಟ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆ-೨೦೨೨ ಅನುಷ್ಠಾನಗೊಳಿಸಬೇಕು. ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬೇಕು. ಕೆಎಂಎಫ್ ಮಾದರಿಯಲ್ಲಿ ಕುಕ್ಕುಟ ಸಹಕಾರ ಮಹಾಮಂಡಲ ಸ್ಥಾಪಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.
ನ.೨೫ರಂದು ನಡೆಯುವ ವಿಧಾನಸೌಧ ಚಲೋ ಹೋರಾಟಕ್ಕೆ ಶಾಸಕರು ಬೆಂಬಲ ನೀಡಿ, ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಗಟೂರು ಶ್ರೀಧರ್, ಜಿಲ್ಲಾ ಅಧ್ಯಕ್ಷ ದಿಂಬ ನಾಗರಾಜಗೌಡ, ಉಪಾಧ್ಯಕ್ಷ ಅಬ್ಬಣಿ ಶಿವಪ್ಪ, ಶ್ರೀರಾಮರೆಡ್ಡಿ, ಪ್ರಕಾಶ್ ರೆಡ್ಡಿ, ಮಾಲೂರು ಶ್ರೀಧರ್, ಧನಂಜಯ, ನಟರಾಜ್, ವೆಂಕಟೇಶಪ್ಪ, ಗಣೇಶ್, ಕಿರಣ್, ಉರಗಲಿ ನಾರಾಯಣಸ್ವಾಮಿ ಇದ್ದರು.