ಸಾರಾಂಶ
-ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ
------ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಿ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ನಮ್ಮಲ್ಲಿರುವ ಸಂಸ್ಕೃತಿ, ಸಂಸ್ಕಾರ ಅಪಾರ ಗೌರವ ತರಲಿದೆ. ಸಾಂಸ್ಕೃತಿಕ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಪರಂಪರೆ ಅರಿವಿನ ಜಾಗೃತಿ ಮೂಡಲಿದೆ ಎಂದು ಕಾಲೇಜಿನ ಉಪನ್ಯಾಸಕ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಶ್ರೀನಿವಾಸ್ ತಿಳಿಸಿದರು.ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಡೋಲ್ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಹೆಮ್ಮೆ ಎಂದರೆ, ಸಾಂಸ್ಕೃತಿಕ ಪರಂಪರೆ. ಇಂದಿಗೂ ಕನ್ನಡ ನಾಡು ಸಾಂಸ್ಕೃತಿಕ ವೈಭವ ವಿಶ್ವಕ್ಕೆ ಸಾರುವ ಪ್ರದೇಶವಾಗಿದ್ದು, ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವ ವಿಶ್ವಮನ್ನಣೆ ಪಡೆದಿದೆ. ಕಾಲೇಜು ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಸಂಕಲ್ಪ ಮಾಡಬೇಕು ಎಂದರು.ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ನಾಗರಾಜ ಬೆಳಗಟ್ಟ, ಕನ್ನಡ ನಾಡು ಸಂಸ್ಕಾರ ಮತ್ತು ಸಂಸ್ಕೃತಿಗಳ ಬೀಡಾಗಿದೆ. ರಾಜ್ಯದ ಉದ್ದಗಲ ವಿವಿಧ ಜಿಲ್ಲೆಗಳಲ್ಲಿ ನಾವು ಕಲೆ, ಸಾಂಸ್ಕೃತಿಯ ಪರಂಪರೆ ಅರಿಯಬಹುದಾಗಿದೆ. ಬೇಲೂರು, ಹಳೇಬೀಡು, ಬಾದಾಮಿ, ಐಹೋಳೆ, ಹಂಪೆ ಮುಂತಾದ ಐತಿಹಾಸಿಕ ಪ್ರದೇಶಗಳಲ್ಲಿ ನಮ್ಮ ಸಂಸ್ಕೃತಿಕ ಪರಂಪರೆಯನ್ನು ಗುರುತಿಸಬಹುದು ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಆಧುನಿಕತೆಯ ಸೋಗಿನಲ್ಲಿ ವಿದ್ಯಾರ್ಥಿಗಳು ನೈಜತೆ ಮರೆಯಬಾರದು ಎಂದರು.ಪ್ರಾಂಶುಪಾಲ ಕೆ.ತಿಮ್ಮಯ್ಯ, ಇಂತಹ ಕಾರ್ಯಕ್ರಮಗಳು ಪದವಿ ಪೂರ್ವ ಕಾಲೇಜು ಮಟ್ಟದಲ್ಲಿ ನಡೆಯುತ್ತಿರುವುದು ಹೆಚ್ಚು ಸಂತಸ ತಂದಿದೆ. ಎಸ್‌ಎಸ್‌ಎಲ್‌ಸಿ ನಂತರ, ಪಿಯು ವಿಭಾಗದ ವಿದ್ಯಾರ್ಥಿಗಳಲ್ಲಿ ಪ್ರೌಢಿಮೆ ಮತ್ತು ಬುದ್ಧಿ ಕೌಶಲ್ಯ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿಯಲು ಇಂತಹ ಕಾರ್ಯಕ್ರಮ ಸಹಕಾರಿ. ನಾವೆಲ್ಲರೂ ಸಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿಲು ಸದಾ ಸನ್ನದ್ದರಾಗಬೇಕು ಎಂದರು.
ಪ್ರಾಚಾರ್ಯ ದೇವರಾಜ್ ಭೀಮಾರೆಡ್ಡಿ, ಹಿರಿಯ ಉಪನ್ಯಾಸಕ ಕೆ.ಎನ್.ವಸಂತಕುಮಾರ್, ಎಚ್.ಆರ್.ಹಬೀಬುಲ್ಲಾ, ಬಿ.ಶಾಂತಕುಮಾರಿ, ಲಲಿತಮ್ಮ, ಪುಪ್ಪಲತಾ, ಡಾ.ರೇಖಾ, ಚಂದ್ರಶೇಖರ್, ಪುಟ್ಟರಂಗಪ್ಪ ಉಪಸ್ಥಿತರಿದ್ದರು.-----
ಪೋಟೋ: ೧೬ಸಿಎಲ್ಕೆ೧ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನುಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಶ್ರೀನಿವಾಸ್ ಉದ್ಘಾಟಿಸಿದರು.