ಹೊಸಪೇಟೆ: ಹೆಣ್ಣು ಮಕ್ಕಳು ಹೆಣ್ಣು ಮಕ್ಕಳನ್ನು ಗೌರವಿಸಿದಾಗ ನಿತ್ಯವೂ ಮಹಿಳಾ ದಿನಾಚರಣೆಯಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತ ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ಸರ್ಕಾರಿ ನೌಕರ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಹಿತಿ ನೂರ್ ಜಹಾನ್ ಅವರ ಅರವತ್ತನೆಯ ಜನ್ಮ ದಿನಾಚರಣೆಯ ಅಂಗವಾಗಿ ಎರಡು ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯವೆಂಬುದು ಆರೋಗ್ಯವಂತ ಸಮಾಜದ ಲಕ್ಷಣ ಹಾಗೂ ಅದನ್ನು ಬರೆಯುವವರು ಆರೋಗ್ಯವಂತರು ಮತ್ತು ಭಾಗ್ಯವಂತರು. ಇತ್ತೀಚೆಗೆ ಪುಸ್ತಕಗಳನ್ನು ಬರೆಯುವವರು ಕಡಿಮೆಯಾಗುತ್ತಿರುವುದು ಮತ್ತು ಓದುವವರು ಸಹ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಪುಸ್ತಕಗಳನ್ನು ಪ್ರತಿಯೊಬ್ಬರು ಖರೀದಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ಪುಸ್ತಕಗಳಿಗೆ ಮಹತ್ವ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ಗಂಗಾವತಿಯ ಸಾಹಿತಿ ಮುಮ್ತಾಜ್ ಬಿರಾದಾರ್ ಬಿಡುಗಡೆಯಾದ ’ಕಲ್ಪನಾ’ ಕಾದಂಬರಿಯ ಕುರಿತು ಮಾತಾಡುತ್ತಾ, ಭೂತ ಮತ್ತು ವರ್ತಮಾನವನ್ನು ಒಟ್ಟುಗೂಡಿಸಿ ಭವಿಷ್ಯದ ಕಲ್ಪನೆಯಲ್ಲಿ ಈ ಕಾದಂಬರಿ ಬರೆಯಲಾಗಿದೆ. ಹೆಣ್ಣಿನ ದಿಟ್ಟತನವನು ಇಲ್ಲಿ ಅನನ್ಯವಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದರು.

ಹಗರಿಬೊಮ್ಮನಹಳ್ಳಿ ಸಾಹಿತಿ ಸುಧಾ ಚಿದಾನಂದ ಗೌಡ ಅನುಬಂಧ ಕಥಾಸಂಕಲನದ ಕುರಿತು ಮಾತನಾಡಿ, ನೂರ್ ಜಹಾನ್ ಅವರ ಕತೆಗಳಿಗಿಂತ ಅವರ ಬದುಕು ದೊಡ್ಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಬಳ್ಳಾರಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಸಭೆಯಲ್ಲಿ ಮಾತನಾಡಿದರು. ಬಳ್ಳಾರಿಯ ಹಿರಿಯ ಸಾಹಿತಿ ಎನ್.ಡಿ. ವೆಂಕಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಚಂದ್ರಶೇಖರಯ್ಯ ರೋಣದ ಮಠ, ಕೂಡ್ಲಿಗಿಯ ಸಾಹಿತಿ ಶೆಕ್ಷಾವಲಿ ಮಣಿಗಾರ್, ಯತ್ನಳ್ಳಿ ಮಲ್ಲಯ್ಯ, ಕಸಪ ತಾಲೂಕು ಅಧ್ಯಕ್ಷ ಗುಂಡಿ ಮಾರುತಿ, ಚಲನಚಿತ್ರ ನಿರ್ದೇಶಕ ಜೋಗಿ ತಾಯಪ್ಪ, ಮರಿಯಮ್ಮನಹಳ್ಳಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ, ಬಂಡಾಯ ಸಾಹಿತಿ ಪೀರ್ ಬಾಷಾ ಸೇರಿದಂತೆ ಇತರರು ಮುಖ್ಯಅತಿಥಿಗಳಾಗಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಾಲ್ಯಾನಾಯ್ಕ ಪ್ರಾರ್ಥಿಸಿದರು. ಎರ್ರಿಸ್ವಾಮಿ ಸ್ವಾಗತಿಸಿದರು. ನೂರ್ ಜಹಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾಮಹೇಶ್ ವಂದಿಸಿದರು. ಎಸ್‌. ನಾಗರಾಜ ನಿರೂಪಿಸಿದರು. ನಂತರ ಕವಿಗೋಷ್ಠಿ ನಡೆಯಿತು. ಸಾಹಿತಿ ಸೌಭಾಗ್ಯಲಕ್ಷ್ಮೀ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸುಮಾರು 20ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.