ಸಾವಿರಾರು ವರ್ಷಗಳ ಹಿಂದೆಯೆ ವೈದ್ಯಕೀಯ, ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ. ಸಂಸ್ಕೃತಿ, ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಜನಿಸಿದ ಭೂಮಿ ಮತ್ತು ಜನ್ಮ ನೀಡಿದ ತಾಯಿಯ ಋಣದ ಪ್ರಜ್ಞೆ ನಮ್ಮೆಲ್ಲರಲ್ಲಿ ಜಾಗೃತವಾಗಿರಬೇಕು.
ಅಳ್ನಾವರ:
ಹಿಂದೂ ಸಂಪ್ರದಾಯ ಹಾಗೂ ಸನಾತನ ಸಂಸ್ಕೃತಿ ಗೌರವಿಸುವ ಮನೋಭಾವನೆ ಬೆಳೆಸಿಕೊಂಡರೆ ಭವ್ಯ, ಸದೃಢ ಭಾರತ ನಿರ್ಮಾಣ ಸಾಧ್ಯವೆಂದು ಖಾನಾಪುರ ತಾಲೂಕಿನ ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು.ಸಮೀಪದ ಕಡಬಗಟ್ಟಿ ಗ್ರಾಮದಲ್ಲಿ ಅಳ್ನಾವರ ಹೋಬಳಿಯ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾವಿರಾರು ವರ್ಷಗಳ ಹಿಂದೆಯೆ ವೈದ್ಯಕೀಯ, ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ. ಸಂಸ್ಕೃತಿ, ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಜನಿಸಿದ ಭೂಮಿ ಮತ್ತು ಜನ್ಮ ನೀಡಿದ ತಾಯಿಯ ಋಣದ ಪ್ರಜ್ಞೆ ನಮ್ಮೆಲ್ಲರಲ್ಲಿ ಜಾಗೃತವಾಗಿರಬೇಕು ಎಂದರು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ವಿಭಾಗದ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಇಡೀ ಜಗತ್ತಿಗೆ ಬದುಕಿನ ಮೌಲ್ಯ ತೋರಿಸಿದ್ದು ಭಾರತ. ಅಪಾಯದ ಅಂಚಿನಲ್ಲಿರುವ ವಿಶ್ವಕ್ಕೆ ಭಾರತವೇ ಮಾರ್ಗದರ್ಶಿ ಆಗಿದೆ. ಹಿಂದೂ ಧರ್ಮದಲ್ಲಿನ ಸಂಸ್ಕೃತಿ, ಪರಂಪರೆ ಪುನರುತ್ಥಾನ ಆಗಬೇಕು. ಇದಕ್ಕಾಗಿ ಭೇದ-ಭಾವ ಮರೆತು ಒಂದಾಗುವ ಮೂಲಕ ವಿಭಜಿಸುವ ಶಕ್ತಿಗಳನ್ನು ಸೋಲಿಸಬೇಕಿದೆ ಎಂದು ಹೇಳಿದರು.ದೇಶದ ಮೌಲ್ಯ, ಇತಿಹಾಸ, ಕೊಡುಗೆ ಹಿಂದೂಗಳಿಗೆ ಗೊತ್ತಿರಬೇಕು. ಹಿಂದೂಗಳು ಈ ದೇಶದ ಪ್ರಾಣ, ಹಿಂದೂ ಬಲಿಷ್ಠವಾದರೆ ರಾಷ್ಟ್ರ ಬಲಿಷ್ಠ. ನಮ್ಮ ಅಕ್ಕಪಕ್ಕದ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಅರಿತು ಜಾಗೃತರಾಗಬೇಕಿದೆ ಎಂದರು.100 ವರ್ಷಗಳ ಹಿಂದೆ ಹಿಂದೂ ಸಂಘಟನೆ ಅಸಾಧ್ಯ ಕೆಲಸವಾಗಿತ್ತು. ಪರಕೀಯರ ಆಳ್ವಿಕೆಯಲ್ಲಿ ಸಿಲುಕಿ ಸಮಾಜವು ತನ್ನ ಅಸ್ತಿತ್ವ ಮರೆತು ಬಿಟ್ಟಿತ್ತು. ಅಯೋಮಯ, ಅಂಧಕಾರದಲ್ಲಿದ್ದ ಸಮಾಜವನ್ನು ಒಂದು ಮಾರ್ಗ ತೋರಿದವರು ಸಂಘದ ಸಂಸ್ಥಾಪಕರು. ಅವರ ದೂರದೃಷ್ಟಿಯಿಂದ ಸಮಾಜದ ಸಂಘಟನೆ ಈಗ ಬಲಾಢ್ಯವಾಗಿದೆ. ಸಂಘದ ಕಾರ್ಯ ಶ್ರೇಷ್ಠ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿದೆ. ಜಾಗೃತ, ಬಲಿಷ್ಠ ಹಿಂದೂ ಸಮಾಜವನ್ನು ಸಂಘಟಿಸುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಡಬಗಟ್ಟಿ, ಕಾಶೇನಟ್ಟಿ, ಹುಲಿಕೇರಿ ಗ್ರಾಮದ ಯುವಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದಲ್ಲಿ ಭಾರತ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಿತು. ವಾಸಂತಿ ಬೇಕ್ವಾಡಕರ ಸ್ವಾಗತಿಸಿದರು. ಶಿವಾಜಿ ಡೊಳ್ಳಿನ ಪ್ರಾಸ್ತಾವಿಕ ಮಾತನಾಡಿದರು. ಆನಂದ ಪಾಟೀಲ ನಿರೂಪಿಸಿದರು. ಸ್ವಪ್ನಾ ಮುರಗೋಡ ವಂದಿಸಿದರು.