ಸಾರಾಂಶ
ಸಮಾಜದಲ್ಲಿ ನಾಗರಿಕ ಹಕ್ಕುಗಳೊಂದಿಗೆ ಎಲ್ಲಾ ವರ್ಗಗಳಿಗೂ ಸಮಾನತೆಯಿಂದ ಬದುಕಲು ಅವಕಾಶ ನೀಡಿರುವ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಮಾಜದಲ್ಲಿ ನಾಗರಿಕ ಹಕ್ಕುಗಳೊಂದಿಗೆ ಎಲ್ಲಾ ವರ್ಗಗಳಿಗೂ ಸಮಾನತೆಯಿಂದ ಬದುಕಲು ಅವಕಾಶ ನೀಡಿರುವ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಜಾ ಪರಿವರ್ತನಾ ವೇದಿಕೆ ಸಹಯೋಗದಲ್ಲಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಸಂವಿಧಾನ ಜಾಗೃತಿ ವರ್ಷ-೨೦೨೪ರ ಅಂಗವಾಗಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-೧೯೫೫, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ-೧೯೮೯ ಹಾಗೂ ನಿಯಮಗಳು-೧೯೯೫ರ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕೀರಣ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನ ಒಂದು ಪುಣ್ಯಗ್ರಂಥವಾಗಿದ್ದು, ಸಮ ಸಮಾಜದ ಉದ್ದೇಶಕ್ಕಾಗಿಯೇ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ನಾವೆಲ್ಲರು ಸಂವಿಧಾನದಡಿಯಲ್ಲಿ ಬದುಕಬೇಕು. ಸಂವಿಧಾನದ ಆಶೋತ್ತರಗಳನ್ನು ಈಡೇರಿಸಲು ಯುವಜನತೆ ಸಂವಿಧಾನವನ್ನು ಅಧ್ಯಯನ ಮಾಡುವುದರ ಜೊತೆಗೆ ಸಂವಿಧಾನದ ಆಶಯಗಳು, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ವರ್ಷವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಜಿಲ್ಲೆಯಾದ್ಯಂತ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ ೨೬ರಂದು ಸಂವಿಧಾನ ಪೀಠಿಕೆ ಓದುವ ಮೂಲಕ ಆರಂಭಗೊಂಡ ಸಂವಿಧಾನ ಜಾಗೃತಿ ಸ್ತಬ್ದಚಿತ್ರವು ಜಿಲ್ಲೆಯ ೧೩೦ ಗ್ರಾಪಂಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ವ್ಯಾಪಕ ಅರಿವು ಮೂಡಿಸಿವೆ. ಸಂವಿಧಾನ ಜಾಗೃತಿ ಕಾರ್ಯಕ್ರಮ ಜಿಲ್ಲೆಯಲ್ಲಿ ಸಾರ್ಥಕಗೊಂಡಿದೆ ಎಂದು ತಿಳಿಸಿದರು.ಸಂವಿಧಾನ ಜಾಗೃತಿಗಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕಲಾವಿದರಿಂದ ಬೀದಿನಾಟಕ, ಸತ್ತಿಗೆ ಸೂರಪಾನಿಗಳೊಂದಿಗೆ ಸಿಂಗಾರಗೊಂಡ ಎತ್ತಿನಗಾಡಿಗಳಿಂದ ಆಕರ್ಷಕ ಮೆರವಣಿಗೆ, ಪುಸ್ತಕ ಜೋಳಿಗೆ, ಮಕ್ಕಳಿಂದ ಸಂವಿಧಾನ ಪೀಠಿಕೆ ಓದುವಂತಹ ವಿಶೇಷ ಕಾರ್ಯಕ್ರಮಗಳಿಂದ ಸಂವಿಧಾನ ಜಾಗೃತಿ ಜಾಥಾ ಜನಮನ ಸೂರೆಗೊಂಡಿದೆ. ಎಲ್ಲಾ ವರ್ಗದ ಜನರು, ಸಂಘಸಂಸ್ಥೆಗಳು ಪಾಲ್ಗೊಂಡು ಜಾಥಾಗೆ ಉತ್ತಮ ಸಹಕಾರ ನೀಡಿದ್ದಾರೆ. ಇದರ ಪ್ರತಿಫಲವಾಗಿಯೇ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ಇದು ನಮ್ಮ ಹೆಮ್ಮೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಮಾತನಾಡಿ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಸಂವಿಧಾನವು ದೇಶಕ್ಕೆ ಅಂತರಿಕ ಭದ್ರತೆಯೊಂದಿಗೆ ಸದೃಢತೆಯನ್ನು ಕಲ್ಪಿಸಿದೆ. ಸಂವಿಧಾನದ ಹಕ್ಕುಗಳನ್ನು ಅನುಭವಿಸುವುದು ಮಾತ್ರವಲ್ಲ. ಕರ್ತವ್ಯಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ. ದೇವರಾಜು ಹಾಗೂ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-೧೯೫೫, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ-೧೯೮೯ ಹಾಗೂ ನಿಯಮಗಳು-೧೯೯೫ರ ಕುರಿತು ಕಾರ್ಯಕ್ರಮದಲ್ಲಿ ಸುದೀರ್ಘವಾಗಿ ವಿಚಾರ ಮಂಡಿಸಿದರು. ನಳಂದ ಬೌದ್ಧ ವಿಶ್ವವಿದ್ಯಾಲಯದ ಬಂತೇಜೀ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು. ಆರಂಭದಲ್ಲಿ ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಭೀಮಗೀತೆ ಗಾಯನ ಎಲ್ಲರ ಗಮನ ಸೆಳೆಯಿತು.