ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ರೈತರು ಸೇರಿ ಯಾರೇ ಕರೆ ಮಾಡಿದರೂ ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಕರೆ ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೆಸ್ಕಾಂ ಮತ್ತು ಗುರುಮಠಕಲ್ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಹಾಗೂ ವಿವಿಧ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿವಿಧ ಇಲಾಖೆ - ನಿಗಮಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಲೈನ್‌ಮೆನ್‌ಗಳು ತಮ್ಮ ವಲಯಗಳಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಅದರಲ್ಲಿ ರೈತರನ್ನು ಸೇರಿಸಿ ಅವರ ಸಮಸ್ಯೆ ಆಲಿಸಿ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿದ್ದು, ರೈತರು ಮುಂಗಾರಿನ ಬೆಳೆಯ ಅಪೇಕ್ಷೆಯಲ್ಲಿದ್ದಾರೆ. ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮುಂಗಾರು ಪ್ರವಾಹ ಪರಿಸ್ಥಿತಿ ಎದುರಿಸಲು ಜೆಸ್ಕಾಂ ಸಿಬ್ಬಂದಿ ಸನ್ನದ್ಧರಾಗಿರಬೇಕು ಎಂದರು.ರೈತರ ಟಿಸಿ ಸುಟ್ಟರೆ ಅತೀ ಶೀಘ್ರದಲ್ಲಿ ಒದಗಿಸಿ, ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗುವ ಮರದ ಕೊಂಬೆ ಕತ್ತಿರಿಸಬೇಕು. ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ರೈತರಿಂದ ದೂರು ಬರದಂತೆ ನೋಡಿಕೊಳ್ಳಬೇಕು. ರೈತರ ಜಮೀನಿಗೆ ವಿದ್ಯುತ್ ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 2500 ವಿದ್ಯುತ್ ಕಂಬಗಳು, ಸುಮಾರು 120 ಟಿಸಿಗಳು ಗೋದಾಮಿನಲ್ಲಿ ಹೆಚ್ಚುವರಿಯಾಗಿ ಕ್ರೂಢೀಕರಿಸಿದ್ದೇವೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಜಿಲ್ಲಾ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ದುಖಾನ್, ಕಲಬುರಗಿ ಅಧೀಕ್ಷಕ ಅಭಿಯಂತರ ಖಂಡಪ್ಪ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಜೆಸ್ಕಾಂ ಎಇಇ ಸುಜೀತಕುಮಾರ, ಅಂಬರೀಶ, ಸಂಜೀವಕುಮಾರ, ಕಳಕಪ್ಪ , ಅಶೋಕ ಚವ್ಹಾಣ, ರಾಥೋಡ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.