ಸಾರಾಂಶ
ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿಯೂ ವಾಲ್‌ಮ್ಯಾನ್‌ಗಳು ದೂರು ಬರುವ ಮುಂಚೆ ತಮ್ಮ ಕೆಲಸ ನಿರ್ವಹಿಸಿದರೆ ಒಳ್ಳೆಯ ಹೆಸರನ್ನು ಪಡೆದುಕೊಳ್ಳಬಹುದು. ಅದರಂತೆ ಉತ್ತಮ ಹೆಸರು ಪಡೆದಿರುವ ೧೭ಮತ್ತು ೧೯ನೇ ವಾರ್ಡಿನಲ್ಲಿ ವಾಲ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ ನರಸಿಂಹಯ್ಯ ವಯೋ ಸಹಜವಾಗಿ ನಿವೃತ್ತಿಯಾಗುತ್ತಿದ್ದು ನಿವೃತ್ತ ಜೀವನ ನೆಮ್ಮದಿಯಿಂದಿರಲಿ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿಯೂ ವಾಲ್‌ಮ್ಯಾನ್‌ಗಳು ದೂರು ಬರುವ ಮುಂಚೆ ತಮ್ಮ ಕೆಲಸ ನಿರ್ವಹಿಸಿದರೆ ಒಳ್ಳೆಯ ಹೆಸರನ್ನು ಪಡೆದುಕೊಳ್ಳಬಹುದು. ಅದರಂತೆ ಉತ್ತಮ ಹೆಸರು ಪಡೆದಿರುವ ೧೭ಮತ್ತು ೧೯ನೇ ವಾರ್ಡಿನಲ್ಲಿ ವಾಲ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ ನರಸಿಂಹಯ್ಯ ವಯೋ ಸಹಜವಾಗಿ ನಿವೃತ್ತಿಯಾಗುತ್ತಿದ್ದು ನಿವೃತ್ತ ಜೀವನ ನೆಮ್ಮದಿಯಿಂದಿರಲಿ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು. ನಗರದ ನಗರಸಭೆಯಲ್ಲಿ ವಾಲ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ನರಸಿಂಹಯ್ಯರವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ನಗರಸಭೆಯಿಂದ ಸನ್ಮಾನಿಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಸ್ವಚ್ಛತೆಗೆ ನೀರು ಪ್ರತಿ ಮನುಷ್ಯನಿಗೂ ಅವಶ್ಯಕವಾಗಿದೆ. ಇದರಲ್ಲಿ ವಾಲ್ ಮ್ಯಾನ್‌ಗಳ ಕರ್ತವ್ಯವೂ ಸಾಕಷ್ಟಿದೆ. ೩೧ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುವ ವಾಲ್‌ಮ್ಯಾನ್‌ಗಳು ತೆರಿಗೆ ಕಟ್ಟುವ ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದರೆ ಅಧಿಕಾರಿಗಳು ಮತ್ತು ಸದಸ್ಯರು ಪ್ರಶ್ನಿಸುವ ಅಗತ್ಯ ಇರುವುದಿಲ್ಲ. ಎಲ್ಲಾ ವಾಲ್‌ಮ್ಯಾನ್‌ಗಳು ಉತ್ತಮ ಕೆಲಸ ಮಾಡುತ್ತಿದ್ದು ಆದರೂ ದೂರುಗಳು ನಮ್ಮ ಗಮನಕ್ಕೆ ಬರುವ ಮುಂಚೆಯೇ ಪೈಪ್‌ಲೈನ್‌ಗಳನ್ನು ಪರೀಕ್ಷಿಸಿ ಸರಿಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ ಇದುವರೆಗೂ ನರಸಿಂಹಯ್ಯನವರ ಬಗ್ಗೆ ಯಾವುದೇ ದೂರು ಬಂದಿಲ್ಲ. ಸಮಯ ನೋಡದೆ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಇದು ಎಲ್ಲರಿಗೂ ಆದರ್ಶವಾಗಲಿ ಎಂದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಎಲ್ಲರಿಗೂ ನಿವೃತ್ತಿ ಸಹಜ. ಆದರೆ ನಗರಸಭೆಯಲ್ಲಿ ನಿಸ್ವಾರ್ಥ ಸೇವೆಯಿಂದ ಸೇವೆ ಸಲ್ಲಿಸಿದ ನರಸಿಂಹಯ್ಯನವರ ಸೇವೆ ನಗರಸಭೆಗೆ ಇನ್ನೂ ಅಗತ್ಯವಿದೆ. ಅವರನ್ನು ಮುಂದೆಯೂ ಸಹ ಉಪಯೋಗಿಸಿ ಕೊಳ್ಳುತ್ತೇವೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹಯ್ಯ, ನನಗೆ ಬಿಲ್ ಕಲೆಕ್ಟರ್ ಹುದ್ದೆಗೆ ಕುಣಿಗಲ್ ನಗರಸಭೆಗೆ ಅವಕಾಶ ಸಿಕ್ಕಿತ್ತು ಆದರೂ ನನ್ನ ಊರನ್ನು ಬಿಟ್ಟು ಹೋಗುವ ಮನಸ್ಸು ಬರಲಿಲ್ಲ. ಯಾರು ಸಹ ನಗರಸಭೆ ಆಸ್ತಿಗೆ ಧಕ್ಕೆ ಉಂಟು ಮಾಡಬಾರದು. ಜನರ ಸಮಸ್ಯೆಗೆ ಸ್ಪಂದಿಸಿದರೆ ಭಗವಂತನ ಕೃಪೆ ಇರುತ್ತದೆ. ಸಮಯ ಮತ್ತು ಸಂಬಳಕ್ಕೆ ಕೆಲಸ ಮಾಡಬಾರದು. ನನ್ನ ಸೇವೆಯ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆಂಬ ನಂಬಿಕೆ ಇದೆ. ನಿವೃತ್ತಿಯಾಗುತ್ತಿರುವುದು ವೈಯಕ್ತಿಕವಾಗಿ ದುಃಖಕರವಾಗಿದೆ ಎಂದು ಭಾವುಕರಾದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಂಗಮೇಶ್, ನಗರಸಭೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿದ್ದರು.