ಸಾರಾಂಶ
ಬಬಲೇಶ್ವರ ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಮಮದಾಪುರ ಕೆರೆಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಮಮದಾಪುರ ಕೆರೆಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಮದಾಪುರ ನಾಡಕಚೇರಿಗೆ ಭೇಟಿ ನೀಡಿದ ಅವರು, ಕಂದಾಯ ಇಲಾಖೆಯ ವಿವಿಧ ಕಾರ್ಯಗಳ ಕುರಿತು ಪರಿಶೀಲಿಸಿದರು. ಕಚೇರಿಗಳಲ್ಲಿರುವ ಕಡತಗಳನ್ನು ಪರಿಶೀಲಿಸಿ, ಸಾರ್ವಜನಿಕರ ಯಾವುದೇ ಕಾರ್ಯಗಳಿಗೆ ವಿಳಂಬ ಧೋರಣೆ ಅನುಸರಿಸದೇ ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸುವಂತೆ ತಿಳಿಸಿದರು.
ಕಚೇರಿ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರೊಂದಿಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಜತೆಗೆ ಅವುಗಳನ್ನು ಪರಿಹರಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಂತರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಿಂದ ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು. ಬೀಜ, ರಸಗೊಬ್ಬರ ವಿತರಣೆ ಸಮರ್ಪಕವಾಗಿ ಮಾಡಬೇಕು. ಬೀಜ-ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.ಮಮದಾಪುರದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ದೊಡ್ಡಕೆರೆ ಮತ್ತು ಸಣ್ಣಕೆರೆಯನ್ನು ವೀಕ್ಷಿಸಿದರು. ನಂತರ ಭೂ ಸ್ವಾಧೀನ ವಿಚಾರ ಕುರಿತು ಪರಿಶೀಲನೆ ನಡೆಸಿ, ಕೆರೆಯ ಪುನಶ್ಚೇತನ ಕುರಿತು ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.ಮಮದಾಪುರ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಕೂಡಗಿ ಎನ್‌ಟಿಪಿಸಿ ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಈ ವರ್ಷ 75 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸಿದರು.ನಂತರ ಕಳೆದ 2 ವರ್ಷಗಳಲ್ಲಿ ಕಾಖಂಡಕಿ ಮತ್ತು ಮಮದಾಪುರ ಅರಣ್ಯದಲ್ಲಿ ನಿರ್ಮಾಣ ಮಾಡಿರುವ ನೆಡುತೋಪನ್ನು ವೀಕ್ಷಿಸಿದರು. ಎನ್‌ಟಿಪಿಸಿ ಸಹಭಾಗಿತ್ವದೊಂದಿಗೆ ಅರಣ್ಯ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಕ್ಷಣೆ, ಪೋಷಣೆ ವ್ಯವಸ್ಥಿತ ನಿರ್ವಹಣೆಗೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.ಮಮದಾಪುರ ಅರಣ್ಯದ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಸಸಿಗಳನ್ನು ನೆಟ್ಟು ನೆಡುತೋಪುಗಳನ್ನು ನಿರ್ಮಾಣ ಮಾಡಿ ಶೂನ್ಯದಿಂದ ಹಸಿರುಮಯದ ಕಡೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿ ಭವಿಷ್ಯದ ದಿನಗಳಲ್ಲಿ ಇದೊಂದು ಉತ್ತಮ ಅರಣ್ಯ ಹಾಗೂ ಮಾದರಿ ಜೀವವೈವಿದ್ಯತೆ ನಿರ್ಮಾಣಕ್ಕೆ ಸಲಹೆ ನೀಡಿದರು. ಕೆರೆಯ ಆಸುಪಾಸಿನ ಉಳಿದ ಜಾಗದಲ್ಲೂ ನೆಡುತೋಪು ನಿರ್ಮಾಣಕ್ಕೆ ಸಲಹೆ ನೀಡಿ, ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಕೊಡುವುದಾಗಿಯೂ ಹೇಳಿದರು. ಇದೇ ವೇಳೆ ಅವರು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ವಿಜಯಪುರ ವಲಯದ ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ್, ಉಪವಲಯ ಅರಣ್ಯಾಧಿಕಾರಿ ಅಪ್ಪಾಸಾಹೇಬ ಬಗಲಿ, ಸಿ.ಎಂ.ಪಟ್ಟಣಶೆಟ್ಟಿ ಮತ್ತು ಗಸ್ತು ಅರಣ್ಯ ಪಾಲಕರಾದ ಶ್ರೀಧರ ಪತ್ತಾರ, ಗುರಪ್ಪ ಬಾಗೇವಾಡಿ ಇತರರು ಉಪಸ್ಥಿತರಿದ್ದರು.