ಸಾರಾಂಶ
ತಿಪಟೂರು ತಾಲೂಕಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಾಗೂ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರು ತಾಲೂಕಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಾಗೂ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮಕೈಗೊಳ್ಳಬೇಕು. ತಾಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರದಲ್ಲಿ ದೂರವಾಣಿಯಿಂದ ದಾಖಲಾಗುವ ಸಮಸ್ಯೆಗಳ ಬಗ್ಗೆ ಕೂಡಲೆ ಸಾರ್ವಜನಿಕರಿಗೆ ಸ್ಪಂದಿಸಬೇಕು. ಈ ಬಗ್ಗೆ ನಮಗೆ ಮಾಹಿತಿ ನೀಡುತ್ತಿರಬೇಕು. ಸಾರ್ವಜನಿಕರಿಂದ ನಮಗೆ ಯಾವುದೇ ದೂರುಗಳು ಬಾರದಂತೆ ಅಗತ್ಯ ಕ್ರಮವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ನಂತರ ನಗರದ ಹಾಸನ ರಸ್ತೆಯ ರೈಲ್ವೆ ಹಳಿ ಮೇಲೆ ನಿರ್ಮಾಣವಾಗಲಿರುವ ಫ್ಲೈ ಓವರ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ತಾಲೂಕಿನ ಹಿಂಡಿಸ್ಕೆರೆ ಗ್ರಾಮಕ್ಕೆ ಭೇಟಿ ನೀಡಿ ಅಂಡರ್‌ಪಾಸ್ ನಿರ್ಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಭೂ ಸ್ವಾಧೀನವಾಗಿರುವ ರೈತರಿಗೆ ದಾಖಲಾತಿಗಳನ್ನು ಹೊಂದಿಸಿಕೊಂಡು ತಡಮಾಡದೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈಚನೂರು ಕೆರೆ ಹಾಗೂ ನೊಣವಿನಕೆರೆ ಬಗ್ಗೆಯೂ ಪರಿಶೀಲನೆ ಮಾಡಿದರು. ನಂತರ ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಉಂಟಾಗಿರುವ ಗೊಂದಲದ ಬಗ್ಗೆ ಗ್ರಾಮಸ್ಥರಿಂದ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮುಂದಿನ ದಿನಗಳಲ್ಲಿ ಶೆಟ್ಟಿಹಳ್ಳಿ ಕೆರೆಗೆ ಎತ್ತಿನಹೊಳೆ ಅಥವಾ ಹೇಮಾವತಿಯಿಂದ ನೀರು ತುಂಬಿಸುವ ಮೂಲಕ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ. ತಾಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಓ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.ಕೋಟ್..ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲಿ ಅಗತ್ಯವಿದಿಯೋ ಅಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಯಾವ ಭಾಗದಲ್ಲಿಯೂ ನೀರಿನ ಸಮಸ್ಯೆ ಆದರೆ ಆಯಾ ತಾಲೂಕುಗಳಲ್ಲಿರುವ ಸಹಾಯವಾಣಿಗಳಿಗೆ ಜನರು ದೂರು ನೀಡಬಹುದು. ದೂರು ಬಂದ ಕೂಡಲೇ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಲಿದ್ದಾರೆ. ಎತ್ತಿನಹೊಳೆ ನೀರು ಬರಲಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. - ಶುಭ ಕಲ್ಯಾಣ್, ಜಿಲ್ಲಾಧಿಕಾರಿ ತುಮಕೂರು