ಸಾರ್ವಜನಿಕರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಿ

| Published : Jul 20 2025, 01:15 AM IST

ಸಾರ್ವಜನಿಕರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಕಡೆ ಸುಳ್ಳು ದಾಖಲೆ ನೀಡಿ ನಿವೇಶನ, ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಕುರಿತು ದೂರು ಬಂದಿವೆ. ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೆ ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡುವುದು ಅವಶ್ಯಕತೆ ಇದೆ.

ಯಲಬುರ್ಗಾ:

ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಅನಧಿಕೃತ ದಾಖಲೆ ಸೃಷ್ಟಿಸಿ ಆಸ್ತಿ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡಿರುವುದು ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಆರ್. ವಸಂತಕುಮಾರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಹುತೇಕ ಕಡೆ ಸುಳ್ಳು ದಾಖಲೆ ನೀಡಿ ನಿವೇಶನ, ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಕುರಿತು ದೂರು ಬಂದಿವೆ. ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೆ ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡುವುದು ಅವಶ್ಯಕತೆ ಇದೆ. ಗ್ರಾಪಂ ಹಂತದಲ್ಲಿ ಸಿಬ್ಬಂದಿ ಮಾತು ಕೇಳಿಕೊಂಡು ಅಧಿಕಾರಿಗಳು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಕೆಲಸಕ್ಕಾಗಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಬೇಕು. ಸಮಸ್ಯೆಗೆ ಪರಿಹಾರ ಇಲ್ಲದಿದ್ದರೆ ಅಧಿಕಾರಿಗಳು ಹಿಂಬರಹ ಕೊಡಬೇಕು ಎಂದರು.

ಅಂಗನವಾಡಿ ಕೇಂದ್ರ, ಎಲ್ಲ ಶಾಲೆಗಳ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಪೂರೈಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಲೋಕಾಯುಕ್ತ ಸಂಪರ್ಕದ ಮಾಹಿತಿ ನಾಮಫಲಕ ಅಳವಡಿಸಬೇಕು ಎಂದು ಡಿವೈಎಸ್ಪಿ ಆರ್. ವಸಂತಕುಮಾರ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕೇಂದ್ರ ಸ್ಥಳದಲ್ಲಿ ವಾಸಿಸದೆ ಪಟ್ಟಣದಲ್ಲಿ ವಾಸ ಮಾಡುತ್ತಿದ್ದಾರೆ. ಇದರಿಂದ ಜನರ ಕೆಲಸ ಸಕಾಲಕ್ಕೆ ಆಗುತ್ತಿಲ್ಲ. ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ ಎಂದು ಮಂಗಳೂರು ಗ್ರಾಮದ ಸಾಮಾಜಿಕ ಕಾರ್ಯಕರ್ತ ರವಿ ಆಗೋಲಿ ಲೋಕಾಯುಕ್ತ ಡಿವೈಎಸ್‌ಪಿಗೆ ದೂರು ಸಲ್ಲಿಸಿದರು.

ಜಮೀನು ಪರಭಾರೆ, ಹಕ್ಕುಪತ್ರ ಬದಲಾವಣೆಗೆ ಸಂಬಂಧಿಸಿದ ವಿಷಯಗಳು ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದ್ದರೂ ಸರ್ವೇ ಅಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮ ಜಮೀನಲ್ಲಿ ರಸ್ತೆಗಾಗಿ ಸರ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅಗತ್ಯ ಮಾಹಿತಿ ನೀಡದೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಎಡವಟ್ಟಿನಿಂದ ಆಸ್ತಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡ ಮಹಾದೇವಪ್ಪ ಕುರಿ ಲೋಕಾಯುಕ್ತರಿಗೆ ಅಹವಾಲು ಸಲ್ಲಿಸಿದರು.

ಈ ವೇಳೆ ಲೋಕಾಯುಕ್ತ ಸಿಪಿಐ ಎಂ. ಸುನೀಲಕುಮಾರ, ತಾಪಂ ಇಒ ಸಂತೋಷ ಪಾಟೀಲ್, ತಹಸೀಲ್ದಾರ್‌ರಾದ ಬಸವರಾಜ ತೆನ್ನಳ್ಳಿ, ಮುರಳೀಧರ ಕುಲಕರ್ಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.