ಸಾರಾಂಶ
ಸಗರದಲ್ಲಿ 3.50 ಕೋಟಿ ರು.ಗಳ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಶಹಾಪುರವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ನೋವಿಗೆ ಸ್ಪಂದಿಸಿದಾಗ ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಆಸ್ಪತ್ರೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು
ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸಗರ ಗ್ರಾಮದಲ್ಲಿ 3.50 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು ಅಶಕ್ತರಾಗಿರುತ್ತಾರೆ. ಇಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಭರವಸೆ ಮೂಡಿಸಬೇಕು ಎಂದರು.ಸಗರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹವು 3 ಕೋಟಿ 11 ಲಕ್ಷ ರು.ಗಳ ವೆಚ್ಚದಲ್ಲಿ 2 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ. ಆಸ್ಪತ್ರೆ ಜಾಗ ನೀಡಿದ ದಾನಿಗಳಿಗೂ ಅಭಾರಿಯಾಗಿದ್ದು, ಆಸ್ಪತ್ರೆಗೆ ಕಂಪೌಂಡ್ ಮತ್ತು ರಸ್ತೆ ನಿರ್ಮಾಣಕ್ಕೆ ಕೆಕೆಆರ್ಡಿಬಿ ವತಿಯಿಂದ ಅನುಮೋದನೆ ಪಡೆಯುತ್ತೇವೆ ಎಂದರು.
ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿಗಳ ಜೊತೆ ಸಹನೆ ತಾಳ್ಮೆಯಿಂದ ವರ್ತಿಸಬೇಕು. ಸಾರ್ವಜನಿಕ ಆಸ್ತಿಯಾಗಿರುವ ಈ ಆಸ್ಪತ್ರೆಯನ್ನು ಎಲ್ಲರೂ ಸ್ವಚ್ಛತೆ ಕಾಪಾಡಿದಾಗ ಮಾತ್ರ ಉತ್ತಮ ಆರೋಗ್ಯ ನೀಡಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು.ಸರ್ಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಬಡತನ ಮತ್ತು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬ ವರ್ಗದವರಿಗೂ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯ ಒದಗಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ರಸ್ತೆಗಳು ಗ್ರಾಮೀಣ ಪ್ರದೇಶಗಳ ಜೀವನಾಡಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಾರುಕಟ್ಟೆಗಳು ಮುಂತಾದ ಅಗತ್ಯ ಸೇವೆಗಳಿಗೆ ಅವಶ್ಯ ಇರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ʼಪ್ರಗತಿಪಥʼ ಯೋಜನೆ ಜಾರಿಯಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಪಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.ಕೌಶಲ್ಯ ಇಲಾಖೆ, ಅರಣ್ಯ ಇಲಾಖೆ ವಿವಿಧ ಇಲಾಖೆಗಳ ಅಭಿವೃದ್ಧಿ ಬಗ್ಗೆ ಒತ್ತು ನೀಡಿ, ರೈತರಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ಹೆಚ್ಚುವರಿ ಅನುದಾನ ತರಲಾಗುವುದು. ಜಿಲ್ಲೆ ಅಭಿವೃದ್ಧಿಯಾಗಲೂ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ಸಗರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂತೋಷ ಎಸ್. ಸುಬೇದಾರ, ಭೂದಾನಿ ತಿರುಪತಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಗುತ್ತೇದಾರ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ಮಾಲಿ ಪಾಟೀಲ್, ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ನಾಗನಗೌಡ ಸುಬೇದಾರ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ಚಂದಪ್ಪ, ಮಾಜಿ ಎಪಿಎಂಸಿ ಸದಸ್ಯ ಬಸವರಾಜ ಕನಗೊಂಡ ಇತರರಿದ್ದರು.-
ಕೋಟ್-1: ರಾಜಕೀಯ ಗಿಮಿಕ್ ಗಾಗಿ ಗ್ಯಾರಂಟಿ ಜಾರಿ ಮಾಡಿಲ್ಲ. ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಲಾಗಿದೆ. ಗ್ಯಾರಂಟಿ ನಿಲ್ಲಿಸುವ ಪ್ರಶ್ನೆ ಇಲ್ಲ. ಸರ್ಕಾರದ ಅವಧಿ ಇರುವವರೆಗೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಜಿಲ್ಲೆಗೆ ಹೆಚ್ಚಿನ ಅನುದಾನ ತರುವ ಮುಖಾಂತರ ಅಭಿವೃದ್ಧಿಗೆ ಶ್ರಮಿಸುವೆ.:- ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.-
10ವೈಡಿಆರ್10: ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು ಲೋಕಾರ್ಪಣೆಗೊಳಿಸಿದರು.-
10ವೈಡಿಆರ್11: ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿದರು.---000---