ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಘಟಕವನ್ನು ಶಾಸಕ ವೀರೇಂದ್ರ ಪಪ್ಪಿ ಉದ್ಘಾಟಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇದ್ದರು.

ರೈತ ಸಂಘದ ಶಾಖೆ ಉದ್ಘಾಟನೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಭರವಸೆ । ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಕನ್ನಡ್ರಭ ವಾರ್ತೆ ಚಿತ್ರದುರ್ಗ

ಭೀಮಸಮುದ್ರ ಸುತ್ತಮುತ್ತಲಿನ ರೈತರು ಗಣಿಗಾರಿಕೆ ಧೂಳಿನಿಂದ ಅನುಭವಿಸುತ್ತಿರುವ ನೋವು ನಿವಾರಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಅದಿರು ಸಾಗಾಣಿಕೆ ಲಾರಿಗಳ ಓಡಾಟದಿಂದ ಆಗುತ್ತಿರುವ ಸಮಸ್ಯೆಗಳ ರೈತರು ಗನಕ್ಕೆ ತಂದಿದ್ದಾರೆ. ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿಯಾಗಿರುತ್ತದೆ. ರೈತರ ಪರವಾಗಿ ಯಾವಾಗಲೂ ಇರುತ್ತೇನೆ ಎಂದರು.

ರೈತರು ಕಷ್ಟಬಿದ್ದು ಭೂಮಿ ಹದಮಾಡಿ ಫಸಲನ್ನು ತೆಗೆಯುತ್ತಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದಾಗ ಸೂಕ್ತ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತರಿಗೆ ಅನುಕೂಲವಾಗುವಂತಹ ಕೃಷಿ ಯೋಜನೆಗಳು ರೂಪಿತವಾಗಬೇಕು. ರೈತರು ತಾವು ಎದುರಿಸುತ್ತಿರುವ ಸಂಕಷ್ಟಗಳ ನಿವಾರಣೆಗೆ ಸಂಘಟಿತರಾಗಬೇಕು. ರೈತ ಬಾಂಧವರು ಒಂದಾದರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಎಂದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಸರಿಯಾಗಿ ಮಾರುಕಟ್ಟೆಗಳಲ್ಲಿ ಬೆಲೆ ಸಿಗದ ಕಾರಣ ರೈತ ಸಾಲಗಾರನಾಗಿದ್ದಾನೆ. ಬೆಳೆಯುವ ಖರ್ಚು ವೆಚ್ಚಗಳಿಗೆ ಸರಿಯಾಗುತ್ತಿದೆ. ಕೃಷಿ ಲಾಭದಾಯಕವಾಗಬೇಕಾದರೆ ವೈಜ್ಞಾನಿಕ ದರ ನಿಗಧಿಯಾಗಬೇಕು ಎಂದರು.

ಭೀಮಸಮುದ್ರ ಸುತ್ತಮುತ್ತಲಿನ ಗ್ರಾಮಗಳು ಗಣಿ ಬಾಧಿತ ಪ್ರದೇಶವಾಗಿರುವದರಿಂದ ಇಲ್ಲಿ ಸೃಷ್ಟಿಯಾಗುವ ಧೂಳು ಬೆಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಧೂಳಿನಿಂದಾಗಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿವೆ. ಭವಿಷ್ಯದಲ್ಲಿ ಗಣಿಗಾರಿಕೆ ವಿರುದ್ಧ ದೊಡ್ಡಮಟ್ಟದ ಹೋರಾಟ ಕಟ್ಟಲು ಸಂಘಟಿತ ಪ್ರಯತ್ನ ಮಾಡೋಣವೆಂದರು.

ವಿಜಾಪುರದ ಪ್ರವೀಣ್ ಗುರೂಜಿ ಮಾತನಾಡಿ, ರೈತ ಮತ್ತು ಪರಿಸರ ಇವೆರಡು ಒಂದೇ ಮುಖದ ಎರಡು ನಾಣ್ಯಗಳು ಇದ್ದಂತೆ. ಪರಿಸರಕ್ಕೆ ಮಾನವ ಅವಲಂಬಿತವಾಗಿ ಬದುಕುತ್ತಿದ್ದಾನೆ. ಪರಿಸರ ಉತ್ತಮವಾಗಿದ್ದರೆ ಕಾಲ ಕಾಲಕ್ಕೆ ಸರಿಯಾಗಿ ಮಳೆಯಿಂದಾಗಿ ಬೆಳೆಯಾಗುತ್ತದೆ. ಪರಿಸರವೇ ವಿನಾಶವಾದರೆ ರೈತನ ಬದುಕು ಹೀನಾಯವಾಗುತ್ತದೆ. ಹಾಗಾಗಿ ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಪಡಗಲಪುರ ನಾಗೇಂದ್ರ ಮಾತನಾಡಿ, ಉದ್ಯೋಗಗಳನ್ನು ಸೃಷ್ಟಿ ಮಾಡುವುದರಲ್ಲಿ ಕೃಷಿ ಕಾಯಕ ಮೊದಲಿಗೆ ಬರುತ್ತದೆ. ಈ ದೇಶದಲ್ಲಿ ಯಾರೂ ಕೂಡ ಉಪವಾಸ ಇರಬಾರದು ಎನ್ನುವ ನಿಟ್ಟಿನಲ್ಲಿ ರೈತ ಕಷ್ಟ ಬಿದ್ದು ಜಮೀನು ಹಸನು ಮಾಡಿ, ಬಿತ್ತಿ ಬೆಳೆಯಲು ಮುಂದಾಗುತ್ತಾನೆ. ಆದರೆ ಸರ್ಕಾರ ತರುವ ಯೋಜನೆಗಳು ಹಾಗೂ ಪರಿಸರವಾಡುವ ಆಟಗಳಿಂದ ರೈತ ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಚಾಮರಸ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಸುರೇಶ್ ಬಾಬು, ಅರುಣ್ ಕುಮಾರ್ ಕುರುಡಿ, ಕೆ.ಸಿ ಹೊರಕೇರಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಹುಣಿಸೆಕಟ್ಟೆ, ಗಣಿ ಬಾದಿತ ಪ್ರದೇಶ ಹೋರಾಟಗಾರ ಸಮಿತಿ ಸಂಚಾಲಕ ರಮೇಶ್ ಬಿ.ದುರ್ಗ, ಸಿ.ಎಲ್ ಅವಿನಾಶ್, ಭೀಮ ಸಮುದ್ರ ಘಟಕದ ಗೌರವಾಧ್ಯಕ್ಷ ಜಯಣ್ಣ, ಅಧ್ಯಕ್ಷ ಶಂಕರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ, ಖಜಾಂಚಿ ಶಿವಕುಮಾರ್, ಸಂಘಟನ ಕಾರ್ಯದರ್ಶಿ ಈರಣ್ಣ, ಸಂಚಾಲಕ ಬಸವರಾಜ್, ಹಾಗೂ ಪದಾಧಿಕಾರಿಗಳಾದ ಪ್ರಸನ್ನ ಕುಮಾರ್, ನಿರಂಜನ್, ಗಂಗಾಧರಪ್ಪ, ವೆಂಕಟೇಶ್, ರಾಜು, ಅಶೋಕ್, ನಾಗರಾಜ್, ಮಂಜು, ಸುರೇಶಣ್ಣ, ಮುತ್ತಣ್ಣ, ಪ್ರಬಣ್ಣ, ಗಿರೀಶ್, ಪ್ರವೀಣ್ ನಾಯಕ್, ರಂಗೇಶ್, ನಾಗರಾಜ್, ಸಿದ್ದೇಶ್, ರಮೇಶ್, ಸತೀಶ್ ನಾಯಕ್, ಶಂಕರ್ ಮೂರ್ತಿ, ನಿಂಗಪ್ಪ, ಭರತಣ್ಣ, ಕುಮಾರಣ್ಣ, ಕೆಂಚಪ್ಪ, ರಮೇಶ್, ಬಸವರಾಜಪ್ಪ, ಮಂಜುನಾಥ್, ನಾಗರಾಜ್, ರಂಗಸ್ವಾಮಿ, ರಾಜಪ್ಪ, ಬಾನಪ್ಪ, ಹನುಮಂತಪ್ಪ, ಅಭಿಲಾಶ್, ಸಿದ್ದೇಶ್, ರಮೇಶ್, ಗೋಪಾಲ, ತಿಪ್ಪೇಸ್ವಾಮಿ, ಶ್ರೀಧರ್ ಇದ್ದರು.