ಎಸ್‌ಟಿ ಸಮುದಾಯದ ಭಾವನೆಗಳಿಗೆ ಸ್ಪಂದಿಸುವೆ: ಆನಂದಸ್ವಾಮಿ ಗಡ್ಡದೇವರಮಠ

| Published : Apr 25 2024, 01:05 AM IST

ಎಸ್‌ಟಿ ಸಮುದಾಯದ ಭಾವನೆಗಳಿಗೆ ಸ್ಪಂದಿಸುವೆ: ಆನಂದಸ್ವಾಮಿ ಗಡ್ಡದೇವರಮಠ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಟಿ ಸಮುದಾಯದ ಭಾವನೆಗಳಿಗೆ ಸ್ಪಂದಿಸುವೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಎಸ್‌ಟಿ ಸಮಾಜದ ಸಭೆಯಲ್ಲಿ ಹೇಳಿದ್ದಾರೆ.

ಹಾವೇರಿ: ಮಾನವ ಬಂಧುತ್ವ ವೇದಿಕೆ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿರುವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಸ್‌ಟಿ ಸಮುದಾಯದ ಭಾವನೆಗಳಿಗೆ ಸ್ಪಂದಿಸುವೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎಸ್‌ಟಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಶೋಷಿತರ ಮತ್ತು ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸುವ ಕಾಂಗ್ರೆಸ್ ನನ್ನನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದೆ. ಪಕ್ಷದ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಮುನ್ನಡೆಯಲು ತಮ್ಮ ಸಹಕಾರ ಮತ್ತು ಬೆಂಬಲ ಅವಶ್ಯ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ತಾವು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಬಿಜೆಪಿ ರಾಜ್ಯಕ್ಕೆ ಬರಬೇಕಿದ್ದ ಬರ ಪರಿಹಾರ ವಿತರಣೆಯಲ್ಲಿ ಅನ್ಯಾಯ ಮಾಡಿದೆ. ಚುನಾವಣಾ ಲಾಭಕ್ಕಾಗಿ ನಾಲ್ಕೂವರೆ ಸಾವಿರ ಕೋಟಿ ರು. ಬರ ಪರಿಹಾರವನ್ನು ತನ್ನಲ್ಲಿಯೇ ಇಟ್ಟುಕೊಂಡು ಕೇವಲ ಭಾವನಾತ್ಮಕ ವಿಚಾರಗಳಡಿ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಪರಿಶಿಷ್ಟ ಪಂಗಡ ಸಮುದಾಯದ ಜತೆಗೆ ಕಾಂಗ್ರೆಸ್ ಸದಾ ಇರುತ್ತದೆ. ಜಿಲ್ಲೆಯ ಸಮಾಜ ಬಾಂಧವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ರಾಮಕೃಷ್ಣ ದೊಡ್ಡಮನಿ, ಆರ್. ಶಂಕರ್, ಸಮುದಾಯ ಜಿಲ್ಲಾಧ್ಯಕ್ಷ ಬಸವರಾಜ ತಳವಾರ, ರಾಜ್ಯ ಉಪಾಧ್ಯಕ್ಷ ಚಂದ್ರಣ್ಣ ಬೇಡರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಬಸವರಾಜ ಹಾದಿಮನಿ, ಶ್ರೀಧರ ದೊಡ್ಡಮನಿ, ಕೆ.ಎಸ್. ಮೃತ್ಯುಂಜಯ, ನಾಗರಾಜ ಬಡಮ್ಮನವರ, ಮಲ್ಲಿಕಾರ್ಜುನ ಬೂದಗಟ್ಟಿ, ಪುಟ್ಟಪ್ಪ ನರೇಗಲ್ಲ, ನಾಗರಾಜ ತಳವಾರ ಇದ್ದರು. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಕಂಗೆಟ್ಟ ಬಿಜೆಪಿ ವೃಥಾ ಆರೋಪಗಳಡಿ ರಾಜಕೀಯ ಮಾಡುತ್ತಿದೆ. ಸಂಕಷ್ಟಗಳ ಸಂದರ್ಭದಲ್ಲಿ ಸ್ಪಂದಿಸದ ಬಿಜೆಪಿಯನ್ನು ಸೋಲಿಸುವುದು ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅದಕ್ಕಾಗಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವಿಗೆ ತಾವು ಸಹಕರಿಸಬೇಕು ಎಂದು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹೇಳಿದ್ದಾರೆ.