ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಷನ್ ಮಡಿಕೇರಿ ನಮ್ಮ ಮಡಿಕೇರಿ ನಮ್ಮ ಹೆಮ್ಮೆ ಸಂವಾದ ಕಾರ್ಯಕ್ರಮದಲ್ಲಿ ವಿಸ್ತ್ರತವಾಗಿ ಚರ್ಚಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸುಂದರ ಪರಿಸರದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳೊಂದಿಗೆ ದಿನದಿನವೂ ಹೆಚ್ಚುತ್ತಿರುವ ವಾಹನ ದಟ್ಟಣೆ, ರಸ್ತೆಗಳ ಅವ್ಯವಸ್ಥೆ, ಸ್ವಚ್ಛತೆಯ ಪರಿಜ್ಞಾನವಿಲ್ಲದೆ ಉಂಟಾಗುತ್ತಿರುವ ಅಶುಚಿತ್ವ, ಅನಧಿಕೃತ ಹೋಂ ಸ್ಟೇಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಪತ್ರಕರ್ತರ ಸಂಘದಿಂದ ಆಯೋಜಿತ ವಿಷನ್ ಮಡಿಕೇರಿ- '''''''' ನಮ್ಮ ಮಡಿಕೇರಿ ನಮ್ಮ ಹೆಮ್ಮೆ- ಸಂವಾದ'''''''' ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.ನಗರದ ರೆಡ್ ಬ್ರ‍್ರಿಕ್ಸ್ ಸಭಾಂಗಣದ ಸತ್ಕಾರ ಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದಿಂದ ಅಧ್ಯಕ್ಷ ಅನಿಲ್ ಹೆಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ಈ ಪುಟ್ಟ ನಗರಿ ಬದಲಾವಣೆಗಳಿಗೆ ಮೈಯೊಡ್ಡುತ್ತಲೆ ಬಂದಿದ್ದು, ಭವಿಷ್ಯದಲ್ಲಿ ಮಡಿಕೇರಿಯನ್ನು ಸುಂದರ ನಗರವನ್ನಾಗಿ ರೂಪಿಸುವ ಮತ್ತು ಸಂರಕ್ಷಿಸುವ ಬಗ್ಗೆ ಯಾವುದೇ ಅಭಿಪ್ರಾಯ ಭೇದಗಳಿದ್ದರೂ ಬದಿಗೊತ್ತಿ, ಜಾತಿ ಮತಗಳ ಭೇದವಿಲ್ಲದೆ ನಗರದ ನಾಗರಿಕರೆಲ್ಲರು ಕೈಜೋಡಿಸಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.ಕ್ರೀಡಾಪಟು ಹಾಗೂ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮಾತನಾಡಿ, ಹಲವಾರು ಅಂತರಾಷ್ಟ್ರೀಯ ಹಾಕಿ ಆಟಗಾರರನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಡುಗೆಯಾಗಿ ನೀಡಿರುವ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಪ್ರಸ್ತುತ, ಕನಿಷ್ಟ ಕಾಳಜಿಯೂ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ ಎಂದು ಖೇದ ವ್ಯಕ್ತಪಡಿಸಿದರು.
ಬಾಸ್ಕೆಟ್ ಬಾಲ್ ಕೋರ್ಟ್‌ಗಳ ನಿರ್ಮಾಣ:ಇದಕ್ಕೆ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಪ್ರತಿಕ್ರಿಯಿಸಿ, ಜಿಲ್ಲೆಯ ಶಾಸಕರು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದು, 1.5 ಕೋಟಿ ರು. ವೆಚ್ಚದಲ್ಲಿ ಸಿಂಥೆಟಿಕ್ ಲೇನ್, 2.50 ಕೋಟಿ ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಕೋಟ್೯ಗಳ ನಿರ್ಮಾಣವಾಗಲಿದೆಯೆಂದು ಮಾಹಿತಿ ನೀಡಿದರು.
ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದ ಕುಮಾರ್, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹದಾಕಾರವಾಗಿ ನಿರ್ಮಿಸಿರುವ ತಡೆಗೋಡೆಯ ಬಳಿ, ಆಕರ್ಷಕವಾದ ''''''''ಮಡಿಕೇರಿ ಸ್ಕ್ವೇರ್'''''''' ನಿರ್ಮಾಣದ ಪ್ರಯತ್ನಗಳು ಇಂದಿಗೂ ಜಾರಿಗೆ ಬಂದಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ ಹಿಂದೆ ರಾಜಾಸೀಟಿನಲ್ಲಿದ್ದ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಮಡಿದವರ ಗೋರಿಗಳನ್ನು ನಗರದ ಐಟಿಐ ಹಿಂಭಾಗಕ್ಕೆ ದಶಕಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಆ ಜಾಗ ಕಾಡುಕೂಡಿ ಗೋರಿಗಳು ಕಾಡು ಪಾಲಾಗಿದೆ ಎಂದರು.ವೈದ್ಯರ ಕೊರತೆಯಿದೆ:
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಇದನ್ನು ನಿವಾರಿಸಿ. ಕಲಾಭವನವನ್ನು ಶೀಘ್ರವೇ ನಿಮಿ೯ಸಿ ಕಲಾವಿದರ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಿ. ತ್ಯಾಜ್ಯ ಎಸೆದವರಿಗೆ ಹೆಚ್ಚಿನ ದಂಡ ವಿಧಿಸಿ ಎಂದು ಪುರಸಭೆಯ ಮಾಜಿ ಸದಸ್ಯ ಟಿ.ಎಂ.ಸತೀಶ್ ಪೈ ಸಲಹೆ ನೀಡಿದರು.ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಮಾತನಾಡಿ, ನಗರದಲ್ಲಿ ಒಂದು ಲೀಟರ್ ನೀರಿನ ಬಾಟಲ್ ಮಾರಾಟ ನಿಷೇಧಿಸಲಾಗಿದೆ. ಇದೊಂದು ಒಳ್ಳೆಯ ಕ್ರಮವಾಗಿದ್ದರೂ, ಅರ್ಧ, ಒಂದು ಲೀಟರ್‌ನಲ್ಲಿ ಬರುವ ಜ್ಯೂಸ್ ಬಾಟಲ್‌ಗಳನ್ನು ಪ್ರಸ್ತುತ ಎಲ್ಲೆಂದರಲ್ಲಿ ಬಳಸಿ ಎಸೆಯಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ನಗರದ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ವಾಹನಗಳ ಏಕ ಮುಖ ಸಂಚಾರ ವ್ಯವಸ್ಥೆ ಸರಿಯಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆ ಎಂದರು.ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರದ ಅನೇಕ ಅಂಗಡಿಗಳಲ್ಲಿ ಸ್ಥಳೀಯದಲ್ಲದ ಸ್ಪೆಸಸ್ ತಂದು ಮಾರಾಟಮಾಡಲಾಗುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು. ಪ್ರವಾಸೋದ್ಯಮ ಸ್ವರೂಪ ಬದಲಾಗಲಿ:
ನಗರಸಭಾ ಸದಸ್ಯ ಅಪ್ಪಣ್ಣ ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಸ್ತುತ ನಗರದಲ್ಲಿ ಕೆಲವೇ ಕೆಲವು ಪ್ರದೇಶಗಳಿವೆ. ಇದನ್ನು ಮಿರಿ ಸಾಂಸ್ಕೃತಿಕ, ಸಾಹಸ ಮತ್ತು ಕೃಷಿ ಪ್ರಧಾನವಾದ ಪ್ರವಾಸೋದ್ಯಮದತ್ತ ಚಿಂತನೆ ಹರಿಸುವ ಅಗತ್ಯತೆ ಇದೆ ಎಂದರು.ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ನಗರ ಯಾವುದೇ ಕ್ರಮಬದ್ಧವಾದ ಯೋಜನೆಗಳಿಲ್ಲದೆ ಬೆಳೆದಿದೆ. ಇದರಿಂದ ಸಮರ್ಪಕವಾದ ರಸ್ತೆ , ಫುಟ್ ಪಾತ್‌ಗಳು ಇಲ್ಲದೆ ಸ್ಥಳೀಯರು ನರಕಯಾತನೆ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳ ದೂರದೃಷ್ಟಿಯ ಯೋಜನಗಳ ನೀಲಿ ನಕಾಶೆಯನ್ನು ನಗರಸಭೆ ಮತ್ತು ಮುಡಾ ರೂಪಿಸಿ, ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಾದ ಅಗತ್ಯವಿರುವುದಾಗಿ ಸಲಹೆ ನೀಡಿದರು.
ನಗರಸಭಾ ಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಮಡಿಕೇರಿ ಪ್ರವಾಸಿ ಕೇಂದ್ರವಾಗಿದ್ದು. ಇಲ್ಲಿನ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ರೂಟ್ ಮ್ಯಾಪ್‌ಗಳ ಬೋಡ್೯ಗಳನ್ನು ಅಳವಡಿಸುವುದು ಅವಶ್ಯವೆಂದು ಸಲಹೆಯನ್ನಿತ್ತರು.ನಗರಠಾಣಾ ಎಸ್‌ಐ ಶ್ರೀಧರ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಮುಂದಿನ ಹದಿನೈದು ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಡಿವಾಣ ಹಾಕುವುದಾಗಿ ದೃಢವಾಗಿ ನುಡಿದರು.
ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಆರ್ ಎಂ. ಸಿ ಯಾರ್ಡ್ ಮತ್ತು ಅಬ್ಬಿಫಾಲ್ಸ್ ರಸ್ತೆಯಲ್ಲಿ ದೊಡ್ಡ ವಾಹನಗಳ ನಿಲುಗಡೆಗೆ ಅವಕಾಶ ನೀಡಿ ಅಲ್ಲಿಂದ ಸಣ್ಣ ವಾಹನಗಳಲ್ಲಿ ಪ್ರವಾಸಿಗರನ್ನು ನಗರದೊಳಕ್ಕೆ ಕರೆತರುವಂತಾಗಬೇಕು ಎಂದರು. ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದರು.ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜತಿನ್ ಮಾತನಾಡಿ ನಗರವ್ಯಾಪ್ತಿಯಲ್ಲಿ ಹೋಂಸ್ಟೇಗಳಿಗೆ ನಿರಪೇಕ್ಷಣಾ ಪತ್ರ ನೀಡುವ ಸಂದರ್ಭದಲ್ಲಿಯೇ ಆ ಹೋಂಸ್ಟೇಗಳಲ್ಲಿ ಆ ಮನೆಯ ಮಾಲೀಕರೇ ವಾಸಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಿರಪೇಕ್ಷಣಾ ಪತ್ರ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಮಾಜಿ ನಗರಸಭಾ ಸದಸ್ಯೆ ವೀಣಾಕ್ಷಿ ನಗರದಲ್ಲಿ ಸ್ವಚ್ಛತೆಯ ನಾಮಫಲಕಗಳ ಅಳವಡಿಕೆ ಮಾಡಬೇಕು. ಪ್ರಸ್ತುತ ಪ್ರವಾಸಿಗರು ಕಸವನ್ನು ನಗರದ ಖಾಲಿ ಇರುವ ಸ್ಥಳಗಳಲ್ಲಿ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಭಾರತೀಯ ವಿದ್ಯಾ ಭವನದ ಪ್ರಮಖರಾದ ಬಾಲಾಜಿ ಕಾಶ್ಯಪ್, ಪ್ರವಾಸೋದ್ಯಮಿ ಮೋಹನ್ ದಾಸ್, ಕೊಡಗು ಹೋಟೇಲ್ ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಜಿರ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಪತ್ರಕರ್ತ ಕುಲ್ಲೇಟಿರ ಅಜಿತ್ ನಾಣಯ್ಯ, ಪ್ರವಾಸೋದ್ಯಮಿ ಪಿ.ಟಿ. ಉಣ್ಣಿಕೃಷ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ಡಾ. ಎಂ.ಜಿ. ಪಾಟ್ಕರ್ , ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ , ನಗರಸಭಾ ಮಾಜಿ ಅಧ್ಯಕ್ಷೆ ಜುಲೈಕಾಬಿ, ಸದಸ್ಯರಾದ ಶ್ವೇತಾ ಪ್ರಶಾಂತ್, ಮೇರಿ ವೇಗಸ್, ಶಾರದಾ ನಾಗರಾಜ್, ಚಿತ್ರಾವತಿ, ಮಿನಾಜ್ ಪ್ರವೀಣ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್ ವಂದಿಸಿದರು. ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅನೇಕ ಸಲಹೆಗಳೊಂದಿಗೆ ಸಂವಾದ ನಿರೂಪಿಸಿದರು. ನಿತ್ಯಾ ಪ್ರವೀಣ್ ಪ್ರಾಥಿ೯ಸಿದರು.ನಗರದಲ್ಲಿ 1250 ಬೀದಿ ನಾಯಿ!ಮಡಿಕೇರಿ ನಗರದಲ್ಲಿ ಅಂದಾಜು 1250 ಬೀದಿ ನಾಯಿಗಳು ಇರುವುದನ್ನು ಈಗಾಗಲೇ ಗುರುತಿಸಲಾಗಿದೆಯೆಂದು ತಿಳಿಸಿದ ಪೌರಾಯುಕ್ತ ರಮೇಶ್, ಸುಪ್ರೀಂ ಕೊರ್ಟ್ ಆದೇಶದಂತೆ ಇವುಗಳಿಗೆ ಆಹಾರ ಒದಗಿಸಲು ನಗರದ 9 ಸ್ಥಳಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಇವುಗಳನ್ನು ಒಂದು ಪ್ರದೇಶದಲ್ಲಿರಿಸುವ ಸಲುವಾಗಿ ಕರ್ಣಂಗೇರಿ ಬಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ 222*122 ಅಡಿ ವಿಸ್ತೀರ್ಣದಲ್ಲಿ 6 ಅಡಿ ಕಾಂಪೌಂಡ್ ವಾಲ್ ನಿರ್ಮಿಸಿ ಅದರಲ್ಲಿ ನಾಯಿಗಳನ್ನು ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.