ಸಾರಾಂಶ
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು 8 ಗಂಟೆಗೆ ಹಾಜರ್ । ನೋಡುಗರ ಮನ ಸೆಳೆದ ವೀರಗಾಸೆ ಪ್ರದರ್ಶನ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಜೀವಾಳ ಎಂಬ ಧ್ಯೇಯವನ್ನು ಹೊತ್ತ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಭಾನುವಾರ ಸರ್ಕಾರ ಹಮ್ಮಿಕೊಂಡ ಮಾನವ ಸರಪಳಿ ಅಲ್ಲಲ್ಲಿ ಸ್ವಲ್ಪ ಗೊಂದಲ ಬಿಟ್ಟರೆ ಭಾಗಶಃ ಯಶಸ್ವಿಯಾಯಿತು.ತಾಲೂಕಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಲವು ಇಲಾಖೆಗಳ ನೌಕರರು ಬೆಳಗ್ಗೆ ಎಂಟು ಗಂಟೆಗೆ ಅವರ ರಾಜ್ಯ ಹೆದ್ದಾರಿಯ ನಿಗದಿತ ಸ್ಥಳಕ್ಕೆ ಆಗಮಿಸಿ ಸಾಲಾಗಿ ನಿಂತಿರುವುದು ಕಂಡು ಬಂತು.
ಖಾಲಿಯಿದ್ದ ರಸ್ತೆಯ ಒಂದು ಭಾಗದಲ್ಲಿ ಉಳಿದ ಶಾಲಾ ಕಾಲೇಜು ವಿದ್ಯಾರ್ಥಿಗಳು 9 ಗಂಟೆಗೆ ಸಾಲಾಗಿ ನಿಂತರು. ಕೆಲವು ಭಾಗದಲ್ಲಿ ಖಾಲಿ ಇರುವುದು ಕಂಡು ಬಂದರೂ ಆ ಸ್ಥಳವನ್ನು ನಿಂತವರೇ ಭರ್ತಿ ಮಾಡಿಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಮಾರು ಐನೂರಕ್ಕೂ ಹೆಚ್ಚು ಮಹಿಳೆಯರು ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗಡಿ ಭಾಗದಲ್ಲಿ ಜಮಾವಣೆಯಾಗಿ 4 ಕಿಮೀ ದೂರದಲ್ಲಿ ಸಾಲಾಗಿ ನಿಂತಿದ್ದರು.ದಾವಣಗೆರೆ ಮತ್ತು ಜಗಳೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಮತ್ತು ಹಲವು ಇಲಾಖೆಗಳ ನೌಕರರು ಬೆಳಗ್ಗೆ 7:30 ಕ್ಕೆ ಹರಿಹರ ತಾಲೂಕಿನ ರಸ್ತೆಯಲ್ಲಿ ಹಾಜರಿದ್ದರು. ತಾಲೂಕಿನ ವಿವಿಧ ಅಧಿಕಾರಿಗಳು ಆದೇಶದಂತೆ ಕಾಳಜಿಯಿಂದ ಕಾರ್ಯ ನಿರ್ವಹಿಸಿದರು. ಬೆಳಗ್ಗೆ 10 ಗಂಟೆಯಾಗುತ್ತಲೇ ಸರಪಳಿಯಲ್ಲಿ ನಿಂತವರು ಮಲೇಬೆನ್ನೂರತ್ತ ಹೆಜ್ಜೆ ಹಾಕಿದರು.
ವಿಶೇಷ-ಮಾನವ ಸರಪಳಿಯ ಸ್ಥಳದಲ್ಲಿಯೇ ಮಲೇಬೆನ್ನೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವೀರಗಾಸೆ ಪ್ರದರ್ಶನ ನೀಡಿ ನೋಡುಗರ ಮೆಚ್ಚುಗೆ ಗಳಿಸಿದರು. ಕೆಲ ಶಾಲಾ ಮಕ್ಕಳು ರಾಷ್ಟ್ರ ನಾಯಕರ ವೇಷ ತೊಟ್ಟು ಗಮನ ಸೆಳೆದರು.ಮಾನವ ಸರಪಳಿ ಕಾರಣಕ್ಕೆ ಕಳೆದ ಒಂದು ವಾರದಿಂದ ಹರಿಹರ ತಾಲೂಕಿನ ರಾಜ್ಯ ಹೆದ್ದಾರಿಯ ರಸ್ತೆಯ ಎರಡೂ ಬದಿ ಶುಚಿಗೊಳಿಸಿ, ಅರಣ್ಯ ಇಲಾಖೆ ಸಿಬ್ಬಂಧಿ ಸಸಿ ಹಾಕಲು ಗುಂಡಿ ತೋಡಿದ್ದರು. ಪೋಲಿಸರು ಮತ್ತು ಗೃಹರಕ್ಷಕ ದಳ ಸಿಬ್ಬಂದಿ ರಸ್ತೆಯಲ್ಲಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು. ರಾಷ್ಟ್ರೀಯ ಸೈನಿಕ ದಳದ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.
* ಮಾನವ ಸರಪಳಿಯ ಅವ್ಯವಸ್ಥೆ
ಬೆಳಗ್ಗೆ 10 ಗಂಟೆ ನಂತರವೂ ಸಹ ಡ್ರೋನ್ ಕ್ಯಾಮೆರಾ ಬರುತ್ತೆ, ಜಿಲ್ಲಾಧಿಕಾರಿ ಬರ್ತಾರೆ ಎಂದು ಹೇಳಿ ಕೆಲವರು ನಿಂತಿದ್ದವರನ್ನು ಗೊಂದಲಕ್ಕೆ ಈಡು ಮಾಡಿದರು. ಬೇರೆ ತಾಲೂಕಿಂದ ಬೇಗ ಆಗಮಿಸಿ ಸಾಲಾಗಿ ನಿಂತಿದ್ದ ಮಹಿಳೆಯರು ಸರ್ಕಾರ ನೀರು ಮತ್ತು ಉಪಹಾರವಿಲ್ಲದ ವ್ಯವಸ್ಥೆ ಮಾಡಬೇಕಿತ್ತು ಎಂಬ ಗುಸು ಗುಸು ಮಾತಾಡಿಕೊಂಡರು. ಕೆಲವು ಭಾಗದಲ್ಲಿ ಸಾಲಾಗಿ ನಿಲ್ಲುವವರಿಲ್ಲದ ಕಾರಣ ಇದ್ದವರೇ ಸ್ಥಳ ಭರ್ತಿ ಮಾಡಿದರು. ಕೆಲ ಪಾಯಿಂಟ್‌ಗಳ ರಸ್ತೆಯಲ್ಲಿ ವಾಹನಗಳ ಓಡಾಟಕ್ಕಾಗಿ ಸ್ಥಳ ಖಾಲಿ ಬಿಡಲಾಗಿತ್ತು. ನಿಯೋಜನೆ ಮಾಡಿದ ವಾಹನಗಳು ಸೂಕ್ತ ಸಮಯದಲ್ಲಿ ಮಹಿಳೆಯರನ್ನು ಕರೆದೊಯ್ಯಲು ಸಾಧ್ಯವಾಗಲಿಲ್ಲ. ಸಂವಿಧಾನ ಪೀಠಿಕೆ ವಾಚನ ಮಾಡಲು ಕೆಲವರು ಆಸಕ್ತಿ ತೋರಲಿಲ್ಲ.