ಬ್ಯಾಡಗಿ: ಜವಾಬ್ದಾರಿಯುತ ಯುವಕರು ದೇಶದ ಬಹುದೊಡ್ಡ ಆಸ್ತಿ. ಆದರೆಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಸೇರಿದಂತೆ ಮಾದಕ ವಸ್ತುಗಳ ಹಿಂದೆ ಬಿದ್ದು ದೇಶ ಹಾಗೂ ಕುಟುಂಬಕ್ಕೆ ಕಂಟಕಪ್ರಾಯವಾಗುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಹೋರಾಟ ಮನೋಭಾವನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪಿಎಸ್ಐ ಭಾರತಿ ಕುರಿ ಯುವಕ ಸಮೂಹಕ್ಕೆ ಕರೆ ನೀಡಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯ ಮೋಟೆಬೆನ್ನೂರ ಇವರ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.ಯುವಕರಿಂದಾಗುವ ಅಪರಾಧ ಕೃತ್ಯಗಳಿಗೆ ಕೇವಲ ಕಾನೂನು ವೈಫಲ್ಯವಲ್ಲ, ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ, ಅರ್ಧಂಬರ್ಧ ಶಿಕ್ಷಣ, ಬಡ ಕುಟುಂಬದ ಹಿನ್ನೆಲೆ, ಸ್ನೇಹಿತರಿಂದ ಬೆಂಬಲ ಇದಕ್ಕೆ ಮೂಲ ಕಾರಣಗಳಾಗಿದ್ದು, ಇಂತಹ ಅಪರಾಧ ಕೃತ್ಯಗಳ ತಡೆಗಟ್ಟುವುದನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಒಂದು ಪ್ರಮುಖ ಸಾಮಾಜಿಕ ಕಳಕಳಿಯನ್ನಾಗಿ ಪರಿಗಣಿಸಿವೆ, ಇದಕ್ಕಾಗಿ ಕಠಿಣ ಕಾನೂನು ಕ್ರಮ ಸೇರಿದಂತೆ ವಿಶೇಷ ಅಭಿಯಾನ ನಡೆಸುವ ಮೂಲಕ ಅರಿವು ಮೂಡಿಸುವ ಹೊಣೆಗಾರಿಕೆ ತೋರುತ್ತಿವೆ ಎಂದರು.
ಹಿಂದಿನ ದಿನಗಳಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಬಡವರು, ಜೀವನ ನಿರ್ವಹಣೆಗಾಗಿ ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ಕುಟುಂಬದ ಹಿನ್ನೆಲೆಯಿಂದ ಆರ್ಥಿಕವಾಗಿ ಸದೃಢವಾಗಿದ್ದವರೂ ಸಹ ಕಾನೂನು ಬಾಹಿರ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು ಇದರಲ್ಲಿ ಪಾಲಕರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎನ್ನುವ ಸ್ಪಷ್ಟತೆ ಕಾಣುತ್ತಿದೆ, ಹೀಗಾಗಿ ಮಕ್ಕಳು ತಪ್ಪು ಮಾಡಿದಾಗ ತಿದ್ದಿ ತಿಳುವಳಿಕೆ ನೀಡುವಲ್ಲಿ ಮುಂದಾಗಬೇಕಾಗಿದೆ ಎಂದರು.ಇದಕ್ಕೂ ಮುನ್ನ ಗ್ರಾಮದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರಮದಾನ ನಡೆಯಿತು, ಬಳಿಕ ಗ್ರಾಮದ ಹಲವೆಡೆ ಶಿಬಿರಾರ್ಥಿಗಳು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶೇಖರಗೌಡ ಪಾಟೀಲ, ಚನ್ನಬಸಪ್ಪ ಸೇರಿದಂತೆ ಎನ್ ಎಸ್ ಎಸ್ ಸಮನ್ವಯಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.