ಶಕ್ತಿ ಉಚಿತ ಬಸ್‌ ಪ್ರಯಾಣಮಾರ್ಪಾಡು: ಡಿಕೆಶಿ ಸುಳಿವು

| Published : Oct 31 2024, 02:00 AM IST

ಸಾರಾಂಶ

‘ಹಲವು ಮಂದಿ ಮಹಿಳೆಯರು ನಮಗೆ ಬಸ್‌ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣ ಬೇಡ ಎಂದು ವಿವಿಧ ರೀತಿಯಲ್ಲಿ ನನಗೆ ವಿಚಾರ ತಿಳಿಸುತ್ತಿದ್ದಾರೆ. ಇಂತಹ ವರ್ಗದವರ ಬೇಡಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ನಾವೆಲ್ಲರೂ ಕೂಡಿ ಅಗತ್ಯ ತೀರ್ಮಾನ ಮಾಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಹಲವು ಮಂದಿ ಮಹಿಳೆಯರು ನಮಗೆ ಬಸ್‌ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣ ಬೇಡ ಎಂದು ವಿವಿಧ ರೀತಿಯಲ್ಲಿ ನನಗೆ ವಿಚಾರ ತಿಳಿಸುತ್ತಿದ್ದಾರೆ. ಇಂತಹ ವರ್ಗದವರ ಬೇಡಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ನಾವೆಲ್ಲರೂ ಕೂಡಿ ಅಗತ್ಯ ತೀರ್ಮಾನ ಮಾಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದ ಮುಂಭಾಗ ಬುಧವಾರ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸಾರಿಗೆ ಸಂಸ್ಥೆಯ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆಯಲ್ಲಿ ಮಾರ್ಪಾಡುಮಾಡುವ ಸುಳಿವು ನೀಡಿದರು.‘ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಮಾಡುವುದಾಗಿ ರಾಹುಲ್‌ಗಾಂಧಿ ಹಾಗೂ ನಾನು ಘೋಷಿಸಿದ್ದೆವು. ಇದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ (ಶಕ್ತಿ) ಘೋಷಿಸಿದೆವು. ಈ ವೇಳೆ ಹಲವು ಮಹಿಳೆಯರು ಇ-ಮೇಲ್‌, ಟ್ವೀಟ್‌ ಹಾಗೂ ಮೊಬೈಲ್‌ ಮೂಲಕ ಸಂಪರ್ಕಿಸಿ ನಮಗೆ ಟಿಕೆಟ್‌ ಖರೀದಿಸುವ ಸಾಮರ್ಥ್ಯವಿದೆ. ನಮಗೆ ಉಚಿತ ಬೇಡ ಎಂದು ಹೇಳುತ್ತಿದ್ದಾರೆ. ಬಸ್ ಚಾರ್ಜ್‌ ಕೊಡಲು ತಯಾರಿದ್ದೇವೆ ಎನ್ನುತ್ತಿರುವ ಈ ವರ್ಗ ಶೇ.5-10 ರಷ್ಟು ಸಿಗಬಹುದು. ಇವರ ಬೇಡಿಕೆ ಬಗ್ಗೆ ನಾವು ಹಾಗೂ ರಾಮಲಿಂಗಾರೆಡ್ಡಿ ಅವರೆಲ್ಲರೂ ಸೇರಿ ಚರ್ಚಿಸಿ ಅಗತ್ಯ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

9 ಸಾವಿರ ಸಿಬ್ಬಂದಿ ನೇಮಕಕ್ಕೆ ಚಾಲನೆ:

ಕೆಎಸ್ಆರ್‌ಟಿಸಿ ಪ್ರಾರಂಭವಾದಾಗ ಕೇವಲ 120 ಬಸ್ ಗಳು ಇದ್ದವು, ಇಂದು 24,282 ಬಸ್ ಗಳು ಇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 6,200 ಬಸ್ ಗಳ ಖರೀದಿಗೆ ಮುಂದಾಗಿದೆ. ಇದರಲ್ಲಿ 3,400 ಬಸ್ ಗಳನ್ನು ಖರೀದಿ ಮಾಡಲಾಗಿದೆ. ಸುಮಾರು 9 ಸಾವಿರ ಡ್ರೈವರ್ ಹಾಗೂ ಕಂಡಕ್ಟರ್ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಖಾಸಗಿಯವರು ಸಂಸ್ಥೆಗೆ ಡೀಸೆಲ್ ಅನ್ನು ಕಡಿಮೆ ದರದಲ್ಲಿ ನೀಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಇದರ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯಲಾಗುವುದು. ನಮ್ಮ ಕೆಎಸ್‌ಆರ್‌ಟಿಸಿ ಸಂಸ್ಥೆ ರಾಷ್ಟ್ರಮಟ್ಟದಲ್ಲಿ 112 ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಇದಕ್ಕೆ ನೌಕರರ ಶ್ರಮ ಕಾರಣ. ಸಂಸ್ಥೆ ಉಳಿದರೆ ನಾವು ಉಳಿಯುತ್ತೇವೆ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದು ಕರೆ ನೀಡಿದರು.